Friday 21 October 2011

ಕಾಶ್ಮೀರಿ ಪಂಡಿತರ ನೋವಿನ ಕಥೆ : ಒಂದು ಉತ್ತಮ ಲೇಖನ


ತಮ್ಮ ಸ್ವಂತ ದೇಶದಲ್ಲೇ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ಕಳೆದ 20 ವರ್ಷಗಳಿಂದ ದೆಹಲಿಯ ಸ್ಲಂ ಗಳಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಗತ್ತಿನ ಸಕಲರಿಗೂ ಆಶ್ರಯ ನೀಡಿರುವ ಈ ಮಹಾನ್ ದೇಶದಲ್ಲಿ ನಮ್ಮವರೇ ಆದ ಕಾಶ್ಮೀರಿ ಪಂಡಿತರಿಗಾಗಿ ಮಿಡಿವ ಮನಸುಗಳೆಲ್ಲಿವೆ ? ಕಾಶ್ಮೀರಿ ಸಂತ್ರಸ್ತೆ ಸುನಂದಾ ವಶಿಷ್ಟ ತಮ್ಮ ಭಾವ ನೋವುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

(ಕನ್ನಡ ಪ್ರಭ : ಅಕ್ಟೋಬರ್ 21: ಪುಟ 9)




Monday 5 September 2011

ಇಂದು ಮೈಸೂರು ನಗರ ಕಟ್ಟಿ ಬೆಳೆಸಿದ ಮಹನೀಯರಲ್ಲಿ ಒಬ್ಬರಾದ ಶ್ರೀ ಎಂ.ವೆಂಕಟಕೃಷ್ಣಯ್ಯ (ಮೈಸೂರು ತಾತಯ್ಯ ) ನವರ ಜನ್ಮದಿನ

ಮೈಸೂರು ಕಟ್ಟಿದ ತಾತಯ್ಯ - ವೃದ್ಧಪಿತಾಮಹ, ದಯಾಸಾಗರ ಪೂಜ್ಯ ಎಂ.ವೆಂಕಟಕೃಷ್ಣಯ್ಯ ಸ್ಮರಣೆ

ಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ,ಕಳಕಳಿ,ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ನಮ್ಮ ದೇಶದಲ್ಲಂತೂ ’ಸ್ವಂತಕ್ಕಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ’ ಎಂಬುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾನುಭಾವರ, ಧೀಮಂತರ ಪರಂಪರೆಯೇ ಇದೆ. ಆದರಿಂದು ಸಮಾಜದ ಪರಿಕಲ್ಪನೆಯನ್ನೇ ಮರೆತು ನಮ್ಮ ನಮ್ಮ ಸುತ್ತ ಸ್ವಾರ್ಥದ ಗೋಡೆಗಳನ್ನು ಕಟ್ಟಿಕೊಂಡಿರುವ ನಮಗೆ ಆ ಮಹನೀಯರ ಬದುಕು,ಆದರ್ಶಗಳ ನೆನಪೇ ಇಲ್ಲದಿರುವುದು ದುರಂತ.
ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ ’ಶಿಕ್ಷಣಕಾಶಿ’ ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ   ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು. ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ,ರಾಜಗುರು-ರಾಜನೀತಿಜ್ಞರಾಗಿ, ಆದರ್ಶ ಅಧ್ಯಾಪಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ,ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ.ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು ’ತಾತಯ್ಯ’ ನೆಂದು, ವೃದ್ಧಪಿತಾಮಹ,ದಯಾಸಾಗರ ಎಂದು ಕರೆದು ಗೌರವಿಸಿದ್ದು. ಮೈಸೂರಿನ ಇಂದಿನ ನಗರ ಬಸ್ ನಿಲ್ದಾಣದ ಎದುರಿಗಿರುವ ’ತಾತಯ್ಯ ಪಾರ್ಕ್’ ನಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪ್ರತಿಮೆಯನ್ನು ಸ್ಥಾಪಿಸಿ ಮೈಸೂರು ಮಹಾಜನತೆ ಅವರಿಗೆ ಗೌರವ ಸಮರ್ಪಿಸಿದೆ.

ವೆಂಕಟಕೃಷ್ಣಯ್ಯನವರ ಬದುಕನ್ನು ಬರೆಯುವುದೆಂದರೆ ಅದು ಒಂದೆರಡು ಶತಮಾನದ ಮೈಸೂರಿನ ಇತಿಹಾಸ ಬರೆಯುವಷ್ಟೇ ಸಾಹಸದ ಕೆಲಸ.ಅವರ ಇಡೀ ಜೀವನವೂ ಪೂರಾ ಹೋರಾಟದ ಬದುಕೇ ಆಗಿತ್ತು. ಸಾಂಸಾರಿಕ ಜೀವನದಲ್ಲಿ ಆರಂಭದಿಂದಲೇ ಬಡತನ,ದಾರಿದ್ರ್ಯ,ದುಃಖ ಸಂಕಟಗಳ  ಸರಮಾಲೆಯೇ ಅವರನ್ನು ಕಾಡಿಸಿದವು.ಅವರು ಎದೆಗುಂದದೆ ಅವೆಲ್ಲವನ್ನೂ ಧೀಮಂತರಾಗಿಯೇ ಎದುರಿಸಿದರು.ಜನಪರರ ದುಃಖ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತೀರಾ ತಾರುಣ್ಯದಲ್ಲಿಯೇ ಕಂಡುಕೊಂಡ ವೆಂಕಟಕೃಷ್ಣಯ್ಯ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳುವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ,ಮಹಾರಾಣಿ ಕಾಲೇಜ್,ಶಾರದಾವಿಲಾಸ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು.ಶಿಕ್ಷಣಕ್ಕೆ ಅಷ್ಟೇನು ಮಹತ್ವವೂ,ಅವಕಾಶವೂ ಇರದಿದ್ದ ಕಾಲದಲ್ಲಿ ತಾವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸ್ವತಃ ೩೫ ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ದಟ್ಟದರಿದ್ರರಾದ,ತಬ್ಬಲಿಗಳಾದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು.ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು.ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಗಾಂಧೀಜಿ ಹರಿಜನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಎಷ್ಟೋ ಮೊದಲು ಹರಿಜನರಿಗಾಗಿ ಹಾಸ್ಟೆಲುಗಳನ್ನು ತಾವೇ ತೆರೆದು ಮೈಸೂರು ಸಂಸ್ಥಾನದ ನಾನಾ ಕಡೆ ಅವರಿಗಾಗಿ ವೃತ್ತಿ ಶಿಕ್ಷಣ ಶಾಲೆಗಳನ್ನು ಸರ್ಕಾರದಿಂದ ತೆರೆಸಿದ ಕೀರ್ತಿ ಅವರದು.ಅಶಕ್ತ ಪ್ರ್ರಾಣಿಗಳಿಗಾಗಿ ಪಿಂಜರಾಪೋಲನ್ನು ಸ್ಥಾಪಿಸಲು ನೆರವಾದರು.’ಮೈಸೂರು ಪತ್ರಿಕೋದ್ಯಮ ಪಿತಾಮಹ’ರಾಗಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿ ಜನಜಾಗೃತಿ ಉಂಟುಮಾಡಿದರು.ಪ್ರಜಾಪ್ರತಿನಿಧಿ ಸಭೆ,ನ್ಯಾಯವಿಧಾಯಕ ಸಭೆ ,ಪೌರಸಭೆ ಮತ್ತು ಎಕನಾಮಿಕ್ ಕಾನ್ಫರೆನ್ಸ್ ಗಳಲ್ಲಿ  ಸದಸ್ಯರಾಗಿ ಪ್ರಜೆಗಳ ಪ್ರತಿನಿಧಿಯಾಗಿ ವಿರೋಧಪಕ್ಷವಾಗಿ ಜನಪರವಾಗಿ ದುಡಿದರು.ಸುಮಾರು ೫೦ ವರ್ಷಕ್ಕೂ ಮೇಲ್ಪಟ್ಟು ಸಂಪೂರ್ಣ ಸಮಾಜದ ಏಳಿಗೆಗಾಗಿ ಅಹರ್ನಿಶಿ ಸೇವೆ ಸಲ್ಲಿಸಿದರು.ತಮ್ಮ ಪತ್ರಿಕಾ ವೃತ್ತಿಯಿಂದಾಗಿ,ಸಾರ್ವಜನಿಕ ಜೀವನದಿಂದಾಗಿ ಅವರು ತಮ್ಮ ಮನೆ ಹೊಲ ಎಲ್ಲ ಮಾರಿಕೊಳ್ಳಬೆಕಾಯಿತು.ಆದರೆ ಯಾವುದರಿಂದಲೂ ಧೃತಿಗೆಡದೆ,ಅನ್ಯಾಯದೊಂದಿಗೆ ರಾಜಿಮಾಡಿಕೊಳ್ಳದೆ ಬಡವರ ನಿಸ್ಸಹಾಯಕರ ಸೇವೆಯನ್ನು ಕೊನೆಯುಸಿರೆಳೆವವರೆಗೂ ವ್ರತವಾಗಿ ಸ್ವೀಕರಿಸಿ ಸಮಾಜಕ್ಕಾಗಿ ಧೀಮಂತ ಸೇವೆ ಸಲ್ಲಿಸಿದ ಶ್ರೇಷ್ಠ ಕರ್ಮಯೋಗಿ ಶ್ರೀ ಎಂ.ವೆಂಕಟಕೃಷ್ಣಯ್ಯನವರು.


೧೮೪೪ ರಲ್ಲಿ ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಜನಿಸಿದ ವೆಂಕಟಕೃಷ್ಣಯ್ಯ ಬಾಲ್ಯದಿಂದಲೇ ಬಡತನವನ್ನು ಬಳುವಳಿಯಾಗಿ ಪಡೆದಿದ್ದರು. ಅವರು ಓದಿದ್ದು ಮೆಟ್ರಿಕ್ಯುಲೇಶನ್ ಅಷ್ಟೆ.ಆದರೂ ವಿದ್ವತ್ಪೂರ್ಣ ಶಿಕ್ಷಕರಾಗಿ ಮರಿಮಲ್ಲಪ್ಪ ಶಾಲೆ,ಸದ್ವಿದ್ಯಾ ಶಾಲೆಗಳಲ್ಲಿ ಸುಮಾರು ೪೦ ವರ್ಷಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಸಾಮಾಜಿಕ ಜಾಗೃತಿಗಾಗಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು.ಕನ್ನಡದಲ್ಲಿ ಸ್ವತಂತ್ರ ಪತ್ರಿಕೆಗಳೇ ಇಲ್ಲದಿದ್ದ ಕಾಲದಲ್ಲಿ ಸಾಧ್ವಿ,ಉದಯ ಚಿಂತಾಮಣಿ,ವಿದ್ಯಾದಾಯಿನಿ,ವೃತ್ತಾಂತ ಚಿಂತಾಮಣಿ,ಹಿತಭೋದಿನಿ,ಸಂಪದಭ್ಯುದಯ, ಮುಂತಾದ ಕನ್ನಡ ಪತ್ರಿಕೆಗಳನ್ನು,
Wealth of Mysore, Mysore Patriot,The civil and social journal, Nature cure   ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿ ಜನಜಾಗೃತಿಯನ್ನುಂಟುಮಾಡಿದರು.ಜನಪರವಾಗಿದ್ದ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾರಣಕ್ಕೆ ಇವರ ಅನೇಕ ಪತ್ರಿಕೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮುಟ್ಟುಗೋಲಾದವು.ತಮ್ಮ ಪತ್ರಿಕೆಗಳ ಮೂಲಕ ನಿರ್ಭಯವಾಗಿ ಆಳುವವರ ಅನ್ಯಾಯಗಳನ್ನು ಹೊರಹಾಕಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಜಾಗೃತಿಯನ್ನು ಉಂಟುಮಾಡುತ್ತಿದ್ದ ವೆಂಕಟಕೃಷ್ಣಯ್ಯನವರು ಆ ಮೂಲಕ ’ಕನ್ನಡ ಪತ್ರಿಕಾ ಪಿತಾಮಹ’ ಎಂಬ ಕೀರ್ತಿಗೆ ಭಾಜನರಾದರು.ಜೊತೆಗೆ ಸಾಹಿತಿಗಳೂ, ವಿದ್ವಾಂಸರೂ ಆಗಿದ್ದ ತಾತಯ್ಯ ಅರ್ಥಸಾಧನ, ದೇಶಾಭಿಮಾನ,ವಿದ್ಯಾರ್ಥಿ ಕರಭೂಷಣ, ಆರೋಗ್ಯಸಾಧನ ಪ್ರಕಾಶಿಕೆ, ಹರಿಶ್ಚಂದ್ರ ಚರಿತ್ರೆ ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ.ಕನ್ನಡ ಸಾಹಿತ್ಯ ಪರಂಪರೆಗೆ ಗಣನೀಯ ಕೊಡುಗೆ ಸಲ್ಲಿಸಿರುವ ಶ್ರೀ ವೆಂಕಟಕೃಷ್ಣಯ್ಯನವರನ್ನು ೧೯೨೨ ರಲ್ಲಿ ದಾವಣಗೆರೆಯಲ್ಲಿ ನಡೆದ ೮ ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು. 
ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಕನ್ನಡ ನಾಡಿಗೆ ಅದ್ವಿತೀಯ ಕೊಡುಗೆ ನೀಡುವಲ್ಲಿ ತಾತಯ್ಯನವರ ಪಾತ್ರ ಬಹು ಮುಖ್ಯವಾದುದು. ಆಗ ಬೊಂಬಾಯಿ ಸರ್ಕಾರದಲ್ಲಿ  ಚೀಫ಼್ ಇಂಜಿನಿಯರ್ ಆಗಿದ್ದ  ವಿಶ್ವೇಶ್ವರಯ್ಯನವರ ಬುದ್ದಿವಂತಿಕೆ,ಕಾರ್ಯದಕ್ಷತೆಗಳು ಅವರದೇ ನಾಡಾದ ಮೈಸೂರಿಗೇ ಲಭಿಸಬೇಕೆಂದು ಮಹಾರಾಜರಿಗೆ ಪತ್ರ ಬರೆದು ,ಅನುಮತಿ ಪಡೆದು  ವಿಶ್ವೇಶ್ವರಯ್ಯನವರು ಮೈಸೂರಿಗೆ ಮರಳುವಂತೆ ಮನವೊಲಿಸಿ ಕರೆತಂದವರು ತಾತಯ್ಯ.

ಸ್ವಾಮಿ ವಿವೇಕಾನಂದರು,ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ರು ,ಮಹಾತ್ಮಾ ಗಾಂಧೀಜಿ,ಜವಾಹರಲಾಲ್ ನೆಹರು ಮುಂತಾದ ಮಹನೀಯರು ತಾತಯ್ಯನವರನ್ನು ಭೇಟಿಯಾಗಿ ಅವರ ಸಮಾಜಕಾರ್ಯಗಳನ್ನು ಪ್ರಶಂಶಿಸಿದ್ದಾರೆ.೧೯೨೭ರಲ್ಲಿ ಅನಾಥಾಲಯಕ್ಕೆ ಭೇಟಿ ನೀಡಿದ್ದ ಗಾಂಧೀಜಿಯವರು ವೆಂಕಟಕೃಷ್ಣಯ್ಯನವರನ್ನು ಆತ್ಮೀಯತೆಯಿಂದ ಆಲಂಗಿಸಿಕೊಂಡು ’ಮೈಸೂರಿನ ಭೀಷ್ಮ’ ಎಂದು ಸಂಭೋಧಿಸಿ ಗೌರವಿಸಿದ್ದಾರೆ. ’ಸುಖದಲ್ಲಿ ಕಷ್ಟದಲ್ಲಿ ಅಚಲವಾಗಿ ನಿಂತು ರಾಷ್ಟ್ರದ ಏಳಿಗೆಗಾಗಿ ದುಡಿದ ರಾಷ್ಟ್ರ ವೀರರೆಂದರೆ ಪೂಜ್ಯ ವೆಂಕಟಕೃಷ್ಣಯ್ಯನವರು’ ಎನ್ನುತ್ತಾರೆ ಅವರ ಶಿಷ್ಯರು, ಒಡನಾಡಿಗಳಲ್ಲೊಬ್ಬರಾದ ನಾಡಿನ ಶ್ರೇಷ್ಟ ಕವಿ ಡಿ.ವಿ.ಜಿಯವರು.   
ವೆಂಕಟಕೃಷ್ಣಯ್ಯನವರು ೧೮೯೬ ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ ’ಅನಾಥಾಲಯ’ ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.ಅವರು ಪ್ರೇರಣೆ ನೀಡಿ ಕಟ್ಟಿ ಬೆಳೆಸಿದ ಮಹಾರಾಣಿ ಶಾಲೆ , ಮರಿಮಲ್ಲಪ್ಪ ಶಾಲೆ ,ಸದ್ವಿದ್ಯಾ ಹಾಗೂ ಶಾರದಾವಿಲಾಸ ಶಾಲೆಗಳು ಇಂದು ನಾಡಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾಗಿವೆ. ಲಕ್ಷಾಂತರ ಜನರಿಗೆ ಅಕ್ಷರಜ್ಞಾನದ ಬೆಳಕು ನೀಡುತ್ತಿವೆ.     
ವೆಂಕಟಕೃಷ್ಣಯ್ಯನವರಂತಹ ಅಪ್ರತಿಮ ದೇಶಭಕ್ತ,ಧೀಮಂತ ರಾಜಕಾರಣಿ, ಪ್ರಾಮಾಣಿಕ ಪ್ರಜಾ ಸೇವಕ, ಸಾಮಾಜಿಕ ಜಾಗೃತಿಯ ಹರಿಕಾರ , ಲೋಕಹಿತಚಿಂತಕನ ಜೀವನ-ಸಾಧನೆಗಳ ಅಧ್ಯಯನ ನಮ್ಮೆಲ್ಲರ ಬದುಕಿಗೆ ದಾರಿದೀಪ,ಒಂದು ಮಹತ್ತರ ಮಾರ್ಗದರ್ಶಿ.

(ಗ್ರಂಥ ಋಣ: ಶ್ರೀ ಲ.ನ.ಶಾಸ್ತ್ರಿಯವರ ಜಾಗೃತಿಯ ಹರಿಕಾರ ವೆಂಕಟಕೃಷ್ಣಯ್ಯ )

ಸೆಪ್ಟೆಂಬರ್ ೧೧ರ ಭಾನುವಾರ ಸಂಜೆ ೪ ಕ್ಕೆ  ಮೈಸೂರಿನ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ತಾತಯ್ಯನವರ ಅಭಿಮಾನಿಗಳು ಹಾಗೂ ಮೈಸೂರಿನ ತಾತಯ್ಯ ವಿಚಾರ ವೇದಿಕೆ ತಾತಯ್ಯನವರ ಕುರಿತ ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಹಿರಿಯ ಕಾದಂಬರಿಕಾರ ಡಾ|| ಎಸ್.ಎಲ್.ಭೈರಪ್ಪ ನವರು ತಾತಯ್ಯನವರ ಕುರಿತ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಿದ್ದಾರೆ.

Tuesday 9 August 2011

ನವೀನ್ ಗಂಗೋತ್ರಿಯ ಒಂದು ವಿಚಾರಪೂರ್ಣ ಲೇಖನ - ಉದಯವಾಣಿಯಲ್ಲಿ

ನಮ್ಮ ಬಳಗದ ಬರಹಗಾರ ಗೆಳೆಯ ನವೀನ ಭಟ್ ಗಂಗೋತ್ರಿಯ ಒಂದು ವಿಚಾರಪೂರ್ಣ ಲೇಖನ: ಆಗಸ್ಟ್ 9 ರ 'ಉದಯವಾಣಿ' ಪತ್ರಿಕೆಯಲ್ಲಿ. ಪತ್ರಿಕೆ ಇದನ್ನು ಪ್ರಕಟಿಸಿದ ರೀತಿ ಹಾಗೂ ಅದಕ್ಕೆ ಹಾಕಿರುವ ಚಿತ್ರ ಎರಡೂ ಅಸಂಬದ್ಧ ಎನ್ನಿಸಿದರೂ ಲೇಖನ ಮಾತ್ರ ಚಿಂತನೆಗೆ ಹಚ್ಚುತ್ತದೆ.
ನವೀನ ಗಂಗೋತ್ರಿ-ಲೇಖನ-ಉದಯವಾಣಿ-ಆಗಸ್ಟ್ ೯,೨೦೧೧ 

Wednesday 3 August 2011

ಗೆಳೆಯರು ಬರೆಯುತ್ತಿದ್ದಾರೆ : ಅವರಿನ್ನೂ ಬೆಳೆಯಲಿ

ನಮ್ಮ ಚೈತ್ರರಶ್ಮಿಯ ಕನಸಿರುವುದೇ ಗ್ರಾಮೀಣ ಹಾಗೂ    
ಅವಕಾಶ ವಂಚಿತ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಹಾಗೂ ಅದರ ಯಶಸ್ಸಿರುವುದೇ ಆ ಎಲ್ಲ ಪ್ರತಿಭಾವಂತರ ಯಶಸ್ಸುಗಳಲ್ಲಿ : ಹಾಗಂತ ನಾನು ನಂಬಿದ್ದೇನೆ. ಬಳಗದ ಗೆಳೆಯರು ಅಂತಲ್ಲ , ನನ್ನ ಸುತ್ತಮುತ್ತಲಿನ ಯಾರೇ ಆಗಲಿ, ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡಿದಾಗ ನಾನು ಪ್ರಾಮಾಣಿಕವಾಗಿ ಖುಷಿಪಟ್ಟಿದ್ದೇನೆ, ಮಾತ್ರವಲ್ಲ ಆ ಸಂತಸವನ್ನು ನನ್ನ ಸಂಪರ್ಕದ ಬಹುತೇಕರಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಅದರ ಉದ್ದೇಶ  ಆ ಮೂಲಕ ಅವರೆಲ್ಲರಿಗೆ ಪ್ರೋತ್ಸಾಹ ಸಿಗಲಿ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದಷ್ಟೇ. ಎರಡೇ ಸಾಲಿನ ಪ್ರೋತ್ಸಾಹದ ಮಾತು ಅದೆಷ್ಟು ಶಕ್ತಿ ತುಂಬಬಲ್ಲುದು ಎಂಬ ಅರಿವಿದೆ ನನಗೆ. ಚೈತ್ರರಶ್ಮಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರೆ ಬಳಗಕ್ಕೆ ಬಂದ ಗೆಳೆಯರು ತುಂಬಾ ಬರೆಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ. ಹೌದು ಅವರು ಇನ್ನಷ್ಟು ಬರೆಯಲಿ, ಮತ್ತಷ್ಟು ಬೆಳೆಯಲಿ. ಎಲ್ಲ ಗ್ರಾಮೀಣ ಪ್ರತಿಭಾವಂತರ ನಗುವಿನಲ್ಲಿ ನಮ್ಮ ಚೈತ್ರರಶ್ಮಿಯ ಗೆಲುವಿದೆ.

ಬಳಗದ ಗೆಳೆಯರ ಒಂದಷ್ಟು ಇತ್ತೀಚಿನ ಪ್ರಕಟಗೊಂಡ ಲೇಖನಗಳು:

  • ನಮ್ಮ ಬಳಗದ ಬರಹಗಾರ,  ವಕ್ರೋಕ್ತಿ  ಚತುರ, ಕನ್ನಡಪ್ರಭ ದಿನಪತ್ರಿಕೆಯ 'ಪದಪದರ ' ಅಂಕಣದ ಅಂಕಣಕಾರ ವಿಶ್ವನಾಥ ಸುಂಕಸಾಳ ರ ಲೇಖನ ಆಗಸ್ಟ್ ೩ ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ : 
  • http://www.kannadaprabha.com/pdf/epaper.asp?pdfdate=8/3/2011  

ವಿಶ್ವ ಸುಂಕಸಾಳ ಲೇಖನ-ಕನ್ನಡಪ್ರಭ-ಆಗಸ್ಟ್ 3
  •  ನಮ್ಮ ಚೈತ್ರರಶ್ಮಿ ಬಳಗದ ಸಂಚಾಲಕರು ಹಾಗೂ ಗೋವಾ ಕನ್ನಡ ಜನನುಡಿ ಪತ್ರಿಕೆಯ ಸಂಪಾದಕರಾದ ಶ್ರೀ ಮಹಾಬಲ ಭಟ್ ರವರ ಲೇಖನ ಹೊಸದಿಗಂತ ಪತ್ರಿಕೆಯಲ್ಲಿ :

ಮಹಾಬಲ ಭಟ್ ಲೇಖನ-ಹೊಸದಿಗಂತ 
  •  ನಮ್ಮ ಬಳಗದ ಬರಹಗಾರ, ಅಮೇರಿಕ ಕನ್ನಡ ಒಕ್ಕೂಟ - 'ಅಕ್ಕ' ಕಥಾಸ್ಪರ್ಧೆ ಪ್ರಥಮ ಬಹುಮಾನ ವಿಜೇತ ಕಥೆಗಾರ ನವೀನ ಭಟ್ ಗಂಗೋತ್ರಿ ಯವರ ಕಥೆ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ :


  • ಕನ್ನಡಪ್ರಭ 'ಪ್ರೇಮಪತ್ರ ಸ್ಪರ್ಧೆ' ಯಲ್ಲಿ ಬಳಗದ ಶ್ರೀಮತಿ ರೇವತಿ ಶೆಟ್ಟಿ ಹಾಗೂ ಶ್ರೀಮತಿ ಕಮಲ.ಎಂ (ಸುಧಾ ಹೆಗಡೆ) ಅವರ ಬರಹಗಳು ಅಂತಿಮ ೨೫ ರಲ್ಲಿ ಆಯ್ಕೆ. ಸಾಹಿತ್ಯ ಪ್ರಕಾಶನ ಹೊರತರುವ ಪುಸ್ತಕದಲ್ಲಿ ಇವರ ಪ್ರೇಮಪತ್ರಗಳು ಪ್ರಕಟವಾಗಲಿವೆ. ಕನ್ನಡಪ್ರಭ -ಸಾಪ್ತಾಹಿಕದಲ್ಲಿ ಪ್ರಕಟಗೊಂಡ ರೇವತಿ ಅವರ ಬರಹ.
ರೇವತಿ ಶೆಟ್ಟಿ ಅವರ ಬರಹ -ಕನ್ನಡಪ್ರಭ ಸಾಪ್ತಾಹಿಕ
 ಈ ಎಲ್ಲ ಗೆಳೆಯರಿಗೆ ಅಭಿನಂದನೆಗಳು. ಮತ್ತೆ ಮತ್ತೆ ಇಂತಹ ಅಭಿನಂದನೆಗಳನ್ನು ಹಂಚಿಕೊಳ್ಳುವ ಕಾಲ ಬರುತ್ತಲೇ ಇರಲಿ.
  

ಒಂದು ಸಂತಸದ ಮಿಂಚು: ಹನುಮಂತ್ ಹಲಿಗೇರಿಗೆ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ 
 
ಹನುಮಂತ್ ಹಲಿಗೇರಿ
ನಮ್ಮ ಬಳಗದ ಗೆಳೆಯ , ಕಥೆಗಾರ ಹನುಮಂತ್ ಹಲಿಗೇರಿ ಯವರ 'ಕತ್ತಲ ಗರ್ಭದ ಮಿಂಚು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ ಲಭಿಸಿದೆ. ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬಳಗಕ್ಕೆ ಪರಿಚಿತರಾದ ಹನುಮಂತ್ ಮೂಲತಃ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದವರು. ಬಿ .ಎ ಓದುತ್ತಿರುವಾಗಲೇ ಗ್ರಾಮೀಣೋದ್ಧಾರದ ಹುಚ್ಚು ಹತ್ತಿಸಿಕೊಂಡು ಊರೂರು ಅಲೆದವರು. ಧಾರವಾಡ ದ ಕರ್ನಾಟಕ ವಿವಿ ಯಿಂದ 'ಐ.ಎಲ್.ಆರ್.ಡಿ' ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಪದವಿ ಪಡೆದು ನಂತರ ಗಾಂಧೀಜಿಯವರ ನೇರ ಅನುಯಾಯಿ ಮಣಿಭಾಯಿ ದೇಸಾಯಿಯವರ 'ಭೈಫ್' ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ವಾರ್ತಾಭಾರತಿ' ಪತ್ರಿಕೆಯಲ್ಲಿ ಉಪಸಂಪಾದಕರು. 

ಬರವಣಿಗೆಯ ಹೆಜ್ಜೆಗುರುತುಗಳು:
  • ೨೦೦೮ರಲ್ಲಿ  "ದೇವರ ಹೆಸರಲ್ಲಿ" ನಾಟಕವು ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯಿಂದ ಸಹಾಯಧನವನ್ನು ಪಡೆದುಕೊಂಡು ಪ್ರದರ್ಶನಗೊಂಡಿದೆ.
  •  ೨೦೦೮ರ  "ಮೊಹರಂ" ಕತೆ ವಿಕ್ರಾಂತ್ ಕರ್ನಾಟಕ ಪತ್ರಿಕೆಯ ಗಾಂಧೀ ಕಥಾಸ್ಪರ್ಧೆಯಲ್ಲಿ  ಆಯ್ಕೆಯಾಗಿ ಪ್ರಕಟಗೊಂಡಿದೆ. ೨೦೧೦ರ ಹೂಸದಿಗಂತದ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನ ಕತ್ತಲೆಯೂಳಗಿನ "ಮಿಣುಕು' ದ್ವೀತಿಯ ಬಹುಮಾನ
  • ೨೦೧೦ ರ ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ.  
  • 'ಊರು ಸುಟ್ಟರೂ ಹನುಮಪ್ಪ ಹೊರಗ' ಕಥೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕಥಾಸ್ಪರ್ಧೆಯಲ್ಲಿ ಪ್ರಥಮ ೫೦೦೦ ರೂ ನಗದು ಬಹುಮಾನ.
  • 'ಕತ್ತಲ ಗರ್ಭದ ಮಿಂಚು' ಚೊಚ್ಚಲ ಕಥಾ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನದೊಂದಿಗೆ ಪ್ರಕಟ-೨೦೧೧ 
  • 'ಕತ್ತಲ ಗರ್ಭದ ಮಿಂಚು' ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ.
ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಭರವಸೆ ಹುಟ್ಟಿಸಿರುವ ಗ್ರಾಮೀಣ ಪ್ರತಿಭಾವಂತ ಗೆಳೆಯ ಹನುಮಂತ್ ಗೆ ಚೈತ್ರರಶ್ಮಿ ಬಳಗದ ಶುಭಹಾರೈಕೆಗಳು. ಅವರ ಸಾಹಿತ್ಯದ ಅರಿವು, ಹರವು ಇನ್ನಷ್ಟು ವಿಸ್ತರಿಸಲಿ. ಅಭಿನಂದನೆಗಳು ಹನುಮಂತ್.


Tuesday 2 August 2011

ನನಗಿಷ್ಟವಾದ ಒಂದು ರಾಷ್ಟ್ರ ಜಾಗೃತಿಯ ಮಾಹಿತಿಪೂರ್ಣ ಲೇಖನ : 

ಡಾ.ಸೂರ್ಯನಾಥ ಕಾಮತ್ : ವಿಜಯ ಕರ್ನಾಟಕ :ಆಗಸ್ಟ್ ೨, ೨೦೧೧ : ಓದಿ, ನಿಮಗೂ ಇಷ್ಟವಾಗಬಹುದು.  

ತಿಲಕರ ಕುರಿತು ಸೂರ್ಯನಾಥ ಕಾಮತರ ಲೇಖನ -ವಿಜಯ ಕರ್ನಾಟಕ-ಆಗಸ್ಟ್ ೨ 
ಸಮಾಜ ಸೇವಕರ ದಿನಾಚರಣೆಯ ಕಾರ್ಯಕ್ರಮ: ಆಗಸ್ಟ್ ೧, ೨೦೧೧ : ಛಾಯಾಚಿತ್ರಗಳು 

ವೇದಿಕೆಯಲ್ಲಿ ಶ್ರೀ ತಿಪ್ಪೇಸ್ವಾಮಿ, ಡಾ.ಸಿ.ಎನ್.ರಾಮಚಂದ್ರನ್, ಶ್ರೀ ರುದ್ರಸ್ವಾಮಿ

ಡಾ.ಸಿ.ಎನ್.ರಾಮಚಂದ್ರನ್ ಉದ್ಘಾಟನೆ

ಸನ್ಮಾನಿತರು: ಶ್ರೀ ತಿಪ್ಪೇಸ್ವಾಮಿ
ಸನ್ಮಾನಿತರು: ಶ್ರೀ ರುದ್ರಸ್ವಾಮಿ

ಶ್ರೀ ಸಿ.ಎನ್.ಆರ್ ಅವರಿಗೆ ಗೌರವ
ಶ್ರೀ ಸಿ.ಎನ್.ಆರ್ ಮಾತು

ವೇದಿಕೆಯಲ್ಲಿ ಶ್ರೀ ತಿಪ್ಪೇಸ್ವಾಮಿ, ಡಾ.ಸಿ.ಎನ್.ರಾಮಚಂದ್ರನ್, ಶ್ರೀ ರುದ್ರಸ್ವಾಮಿ





ಜನಪದ ಗಾಯನ: ಸಾತ್ವಿಕ  ತಂಡ
ಶ್ರೀ ತಿಪ್ಪೇಸ್ವಾಮಿ ಮಾತು


ಶ್ರೀ ರುದ್ರಸ್ವಾಮಿ- ಕನ್ನಡ ಕಲಿಕಾ ಪ್ರಾತ್ಯಕ್ಷಿಕೆ


ಸಮಾಜ ಸೇವಕರ ದಿನಾಚರಣೆ -ಆಗಸ್ಟ್ ೧,೨೦೧೧ ; ಕಾರ್ಯಕ್ರಮದ ವರದಿ :ವಿಜಯ ಕರ್ನಾಟಕದಲ್ಲಿ 

ಕಾರ್ಯಕ್ರಮದ ವರದಿ
 

Monday 1 August 2011

ಆಗಸ್ಟ್ ೧: ಇಂದು 'ಸಮಾಜ ಸೇವಕರ ದಿನ' 

ನಮ್ಮ 'ಸಮಾಜ ಸೇವಕರ ಸಮಿತಿ' ಗೆ  ಒಂಭತ್ತರ ಸಂಭ್ರಮ : ಇಬ್ಬರು ನಿಸ್ವಾರ್ಥ ಸಮಾಜ ಸೇವಕರಿಗೆ ಸನ್ಮಾನ...

ಇಂದು ಸಮಾಜ ಸೇವಕರ ದಿನ. ಅಪ್ಪಂದಿರ, ಅಮ್ಮಂದಿರ ದಿನ, ಪ್ರೇಮಿಗಳ ದಿನ....ಹೀಗೆ ಎಲ್ಲರಿಗೂ ಒಂದು ದಿನ ಇರುವಾಗ ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವ ಮಹನೀಯರನ್ನು ಸ್ಮರಿಸಲು, ಗೌರವಿಸಲು, ಅವರ ಕಾರ್ಯದಿಂದ ನಾವು ಸ್ಪೂರ್ತಿ ಪಡೆಯಲು ಒಂದು ದಿನ ಬೇಕು ಅಂತ ಆಲೋಚಿಸಿ ಸಮಾಜ ಸೇವಕರ ಸಮಿತಿಯ ಗೆಳೆಯರು ಕಳೆದ ೮ ವರ್ಷಗಳಿಂದ ಆಗಸ್ಟ್ ೧ ರ ಈ ದಿನ 'ಸಮಾಜ ಸೇವಕರ ದಿನಾಚರಣೆ' ಯನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ. ಅಂದು ಸದ್ದಿಲ್ಲದೇ, ಸುದ್ದಿಯ ಹಂಗಿಲ್ಲದೆ ಸಮಾಜದ ಕೆಲಸ ಮಾಡುತ್ತಿರುವ ಮಹನೀಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ೨೫ ಅಂತಹ ವಿಶಿಷ್ಟ ಮಹನೀಯರನ್ನು ಸಮಿತಿ ಗೌರವಿಸಿದೆ. ಈ ಬಾರಿ ಬೆಂಗಳೂರಿನ ಜಲನಿರ್ವಹಣಾ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದ ಜಲತಜ್ಞ ಶ್ರೀ ತಿಪ್ಪೇಸ್ವಾಮಿ ಹಾಗೂ ಕಾಲ್ನಡಿಗೆಯಲ್ಲೇ ಗಡಿಭಾಗದ 6048 ಕನ್ನಡ ಶಾಲೆಗಳಿಗೆ ಭೇಟಿ ನೀಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಪಾಠ ಮಾಡಿ ಮಕ್ಕಳ ಹೃದಯ ಗೆದ್ದು 'ನಡೆದಾಡುವ ಶಿಕ್ಷಕ' ಎಂಬ ಗೌರವಕ್ಕೆ ಪಾತ್ರರಾಗಿರುವ ಶ್ರೀ ರುದ್ರಸ್ವಾಮಿ ಅವರನ್ನು ಸಮಿತಿ 'ಸಮಾಜ ಸೇವಕರ ದಿನ' ವಾದ ಇಂದು ಬೆಂಗಳೂರಿನ ಜೆ.ಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವಿಸುತ್ತಿದೆ. ಸನ್ಮಾನಿತರ ಕಿರು ಪರಿಚಯ:

ಶ್ರೀ ತಿಪ್ಪೇಸ್ವಾಮಿ:

ಶ್ರೀ ತಿಪ್ಪೇಸ್ವಾಮಿ
ಮಠದ ನಾಗೇಂದ್ರಯ್ಯ ತಿಪ್ಪೇಸ್ವಾಮಿ, ಮೂರ್ತಿ 
ಚಿಕ್ಕದಾದರೂ ಕೀರ್ತಿದೊಡ್ಡದು ನಾಣ್ಣುಡಿಗೆ ಅನ್ವರ್ಥ. ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಯೋಜನೆಗಳ ಪ್ರಸ್ತಾಪವಾದಾಗಲೆಲ್ಲ ತಟ್ಟನೆ ನೆನಪಿಗೆ ಬರುವ ಹೆಸರು.ಬೆಂಗಳೂರು ಜಲಮಂಡಲಿ ಇಂದು ದೇಶ-ವಿದೇಶಗಳಲ್ಲಿ ಹೆಸರು ಮಾಡಿ ಕುಡಿಯುವ ನೀರು ಪೂರೈಕೆ ಹಾಗೂ ಗ್ರಾಹಕ ಸೇವೆಗಾಗಿ ರಾಷ್ಟ್ರೀಯ -ಅಂತಾರಾಷ್ಟ್ರೀಯ  ಪ್ರಶಸ್ತಿ-ಮಾನ್ಯತೆ ಪಡೆದುಕೊಂಡಿದ್ದರೆ ಅದರಲ್ಲಿ ಶ್ರೀ ಎಂ.ಎನ್.ತಿಪ್ಪೇಸ್ವಾಮಿಯ ಸುಮಾರು ಮೂರು ದಶಕಗಳ  ನಿಷ್ಕಾಮ ಪರಿಶ್ರಮ ಪೂರ್ವಕ ಸೇವೆಯ ಪಾಲೂ ಗಮನಾರ್ಹ.

೭೦ ರ ದಶಕದಲ್ಲಿ ಜಲ ಮಂಡಲಿಯ ಇಂಜಿನೀಯರ್ ಆಗಿ ಸೇವೆ ಆರಂಭಿಸಿ, ಅದರ ಯೋಜನಾ ಮುಖ್ಯ ಅಭಿಯಂತರಾಗಿ ನಿವೃತ್ತರಾಗುವವರೆಗೂ ಅವರು ಸಲ್ಲಿಸಿದ ಸೇವೆ ಆಧುನಿಕ ಬೆಂಗಳೂರು ಮಹಾನಗರದ ಬಹು ಜ್ವಲಂತ ನಾಗರಿಕ ಸಮಸ್ಯೆಯಾದ ಸಮರ್ಪಕ ನೀರು ಪೂರೈಕೆ ಯಶೋಗಾಥೆಯ ಬಹು ಮಹತ್ವದ ಅಧ್ಯಾಯ.

ಕುಡಿವ ನೀರು ಪೂರೈಕೆ ಹಾಗೂ ನೈರ್ಮಲ್ಯ ನಿರ್ವಹಣೆಯ ತಳಮಟ್ಟದ ನಿರ್ವಹಣೆ-ನಿಭಾವಣೆಯಿಂದ ಹಿಡಿದು ಅದರ ಯೋಜನೆ, ಕಾರ್ಯನುಷ್ಠಾನದವರೆಗೆ ತಿಪ್ಪೇಸ್ವಾಮಿಯವರ ಪರಿಣತ ಅನುಭವದ ವ್ಯಾಪ್ತಿ-ವಿಸ್ತಾರ..

ಬೆಂಗಳೂರು ನಗರಕ್ಕೆ ಕಾವೇರಿ ನೀರು ತರುವ ಬೃಹತ್ ಯೋಜನೆಗಳಿಂದ ಹಂತ-೧ ಹಾಗೂ ಹಂತ-೨ ರ ಸಂಪೂರ್ಣ ಯೋಜನಾ ವರದಿ ತಯಾರಿಕೆ,ನೈರ್ಮಲ್ಯ ಯೋಜನೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ. ಎರಡನೆ ಹಂತದ ಯೋಜನೆಗೆ ಜಪಾನಿನ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜೆಬಿಐಸಿ ಯಿಂದ ನೆರವು ಪಡೆದುಕೊಳ್ಳುವುದರಲ್ಲಿ ತಿಪ್ಪೇಸ್ವಾಮಿಯವರ ಪಾತ್ರ ಗಮನಾರ್ಹ. ಇದಲ್ಲದೆ ಆಸ್ಟ್ರೇಲಿಯ ಸರ್ಕಾರದ ನೆರವುಯೋಜನೆ,ಪ್ರೆಂಚ್ ನೆರವಿನ ಯೋಜನೆಗಳಲ್ಲೂ ಅವರ ಪಾತ್ರ ಉಲ್ಲೇಖನೀಯ.೧೯೯೭-೯೯ ರಲ್ಲಿ ಕಾರ್ಪೋರೆಟ್ ಪ್ಲಾನಿಂಗ್ ವಿಭಾಗದ ಸೂಪರಿಂಟೆಂಡಿಂಗ್ ಇಂಜಿನಿಯರ್ ಹಾಗೂ ೧೯೯೯-೨೦೦೩ ವರೆಗೆ ಕಲುಶಿತ ನೀರು ನಿರ್ವಹಣಾ ಚೀಫ್ ಇಂಜಿನಿಯರ್ .೨೦೦೩-೨೦೦೫ ರಲ್ಲಿ ಮುಖ್ಯ ಇಂಜಿನಿಯರ್ ಹಾಗೇ ೩೪ ವರ್ಷಗಳ ಬೆಂಗಳೂರು ಜಲಮಂಡಲಿಯ ಪ್ರಗತಿಯೊಡನೆ ತಿಪ್ಪೇಸ್ವಾಮಿಯವರ ಸೇವೆ ಹಾಸುಹೊಕ್ಕಾಗಿದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ-ಜಿ ಐ ಎಸ್ ಯನ್ನು ಕುಡಿಯುವನೀರಿನ ಕ್ಷೇತ್ರದಲ್ಲಿ ಅಳವಡಿಸಿದ ಕೀರ್ತಿ ತಿಪ್ಪೇಸ್ವಾಮಿಯವರಿಗೆ ಸಲ್ಲುತ್ತದೆ.ಇದು ದೇಶದಲ್ಲೇ ಮೊದಲ ಪ್ರಯೋಗವಾಯಿತು. ಹಾಗೆಯೇ ಕಲುಶಿತ ನೀರಿನ ಮರು ಬಳಕೆ ವಿಧಾನಗಳ ಸ್ಥಾವರವನ್ನು ಯಲಹಂಕ ಮತ್ತಿತರ ಕಡೆ ಸ್ಥಾಪಿಸುವುದರಲ್ಲೂ ಇವರ ಪಾತ್ರ ಪ್ರಮುಖವಾಗಿದೆ. ೨೦೦೫ ರಲ್ಲಿ ನಿವೃತ್ತಿ ಹೊಂದಿದ ಮೇಲೂ ತಿಪ್ಪೇಸ್ವಾಮಿ ಕುಡಿವ ನೀರಿನ ಯೋಜನೆಗಳಲ್ಲಿ ತೀವ್ರ ಆಸಕ್ತ. ಮಲೇಶಿಯ, ಸಿಂಗಪುರ್, ಆಸ್ಟ್ರೇಲಿಯ, ಜಪಾನ್, ಯುರೋಪ್, ಅಮೇರಿಕಗಳಿಗೆ ಹಲವಾರು ಬಾರಿ ಅಧ್ಯಯನ ಪ್ರವಾಸ ಕೈಗೊಂಡಿರುವ ಅವರು ಈವರೆಗೆ ಸುಮಾರು ೩೫೦ ತಾಂತ್ರಿಕ ಪ್ರಬಂಧಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ಗೋಷ್ಠಿಗಳಲ್ಲಿ ಸಾದರಪಡಿಸಿದ್ದಾರೆ.ಬೆಂಗಳೂರು ,ದಿಲ್ಲಿ,ಯು.ಕೆ,ಆಸ್ಟ್ರೇಲಿಯಗಳ ಹಲವಾರು ಉನ್ನತ ಮಟ್ಟದ ತಾಂತ್ರಿಕ ಸಂಘಗಳ ವೃತ್ತಿಸದಸ್ಯರಾಗಿ ಕುಡಿವ ನೀರಿನ ಕ್ಷೇತ್ರದಲ್ಲಿ ಅವರು ಸಲಹೆಗಾರರಾಗಿದ್ದಾರೆ ಹಲವಾರು ಸಂಘ-ಸಂಸ್ಥೆಗಳಿಗೆ ರಾಜ್ ಕೋಟೆ,ಚೆನ್ನೈ,ತಿರುವನಂತಪುರ ನಗರ ಯೋಜನೆಗಳ ಸಲಹೆಗಾರರು ಹೌದು.

ಬೆಂಗಳೂರಿನಲ್ಲಿ ಜಲ ಸಾಕ್ಷರತೆ ಪ್ರಚುರ ಪಡಿಸಲು ಹಲವಾರು ಕನಸುಗಳನ್ನ್ನು ಈಗಲೂ ಹೋಂದಿರುವ ತಿಪ್ಪೇಸ್ವಾಮಿ
ವಿದೇಶಗಳಲ್ಲಿರುವಂತೆ 'ಜಲಮ್ಯೂಸಿಯಂ' ಸ್ಥಾಪನೆ, ಸರ್ಕಾರ ಮುಂದೆ ಬಂದರೆ ತಮ್ಮ ಪರಿಣತಿಯನ್ನು ನೀಡಲು ಉತ್ಸುಕರಾಗಿದ್ದಾರೆ.

ಅವರ ಪರಿಣತಿ ,ಅನುಭವ ಗಮನಿಸಿ ಕರ್ನಾಟಕ ಸರ್ಕಾರ ಅವರನ್ನು ರಾಷ್ಟ್ರೀಯ ಕೆರೆ ಸಂರಕ್ಷಣಾ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ದಿ ಯೋಜನೆ ತಾಂತ್ರಿಕ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿತು.
ಕುಡಿಯುವ ನೀರಿನ ಪ್ರಸ್ತಾಪವಾದಾಗಲೆಲ್ಲ ಇಂದಿಗೂ ಬತ್ತದ ಉತ್ಸಾಹ. ವಿಸ್ತಾರಗೊಂಡ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಜಲನಿರ್ವಹಣೆ ಕುರಿತ ಅವರ ಪ್ರೌಢ ಅಧ್ಯಯನ ವರದಿ ಮುಂದಿನ ೨೫ ವರ್ಷಗಳಲ್ಲಿ ನಗರ ನೀರಿನ ನಿರ್ವಹಣೆ ಕುರಿತ ಕೈಪಿಡಿ.

ನಾಗರಿಕರಿಗೆ ಸುರಕ್ಷಿತ ಕುಡಿವ ನೀರು ಪೂರೈಕೆ ತಿಪ್ಪೇಸ್ವಾಮಿಯವರ ಸಾಮಾಜಿಕ ಸೇವೆಯ ದೀಕ್ಷೆ ಕೇವಲ ಸರ್ಕಾರಿ ಇಂಜಿನಿಯರ್ ದೃಷ್ಟಿ ಮಾತ್ರವಲ್ಲ. ಆದ್ದರಿಂದಲೇ ಇಂದು  ಅವರನ್ನು ಅರಸಿ ಬಂದಿರುವುದು ಇಂದಿನ ಸಮಾಜ ಸೇವಕರ ಸಮಿತಿ ತೆರೆಮೆರೆ ಸಾಧಕನನ್ನು ಗುರುತಿಸಿ ನೀಡುತ್ತಿರುವ ಪುರಸ್ಕಾರ.
(ಪರಿಚಯ ಕೃಪೆ: ಶ್ರೀ ಕೆ.ಎಸ್.ಅಚ್ಯುತನ್ , ಹಿರಿಯ ಪತ್ರಕರ್ತರು)

ಶ್ರೀ ರುದ್ರಸ್ವಾಮಿ: 

ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ರಾಜ್ಯವನ್ನು
ಶ್ರೀ ರುದ್ರಸ್ವಾಮಿ
ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಮಾಡಿ ಗಡಿ ಭಾಗದ ೬೦೪೮ ಶಾಲೆಗಳಲ್ಲಿ ’ಕನ್ನಡಭಾಷಾ ಸುಲಭ ಕಲಿಕಾ ಪ್ರಾತ್ಯಕ್ಷಿಕೆ’ ನೀಡಿ ನಾಡಿನ ಲಕ್ಷಾಂತರ ಮಕ್ಕಳ ಹೃದಯ ಗೆದ್ದು ’ನಡೆದಾಡುವ ಶಿಕ್ಷಕ’ ಎಂಬ ಖ್ಯಾತಿಗೆ ಪಾತ್ರರಾಗಿರುವವರು ಶ್ರೀ ರುದ್ರಸ್ವಾಮಿ. ೧೯೮೦ ರಲ್ಲಿ ಕನಪುರದಲ್ಲಿ ಜನಿಸಿದ ರುದ್ರಸ್ವಾಮಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕನಕಪುರದಲ್ಲಿ ಮುಗಿಸಿ ನಂತರ ತಮ್ಮ ಕಾಲೇಜು ಶಿಕ್ಷಣವನ್ನು ಸಿದ್ಧಗಂಗಾ ಮಠದಲ್ಲಿ ಪೂರೈಸಿದರು.  

ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರುದ್ರಸ್ವಾಮಿ ಶಾಲೆಗಳಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸಲು ಇರುವ ಹಲವು ತೊಡಕುಗಳನ್ನು ಮನಗಂಡರು. ಆ ಕುರಿತು ಆಧ್ಯಯನ ಮಾಡಿ , ಶೈಕ್ಷಣಿಕವಾಗಿ ಅಧ್ಯಯನ ನಡೆಸಿ ತಮ್ಮದೇ ಆದ ಹೊಸತೊಂದು ಕ್ರಿಯಾಶೀಲ ಕಲಿಕಾ ವಿಧಾನವೊಂದನ್ನು ರೂಪಿಸಿದರು. ಈ ಕಲಿಕಾ ವಿಧಾನಕ್ಕೆ ಅಗತ್ಯವಾದ ತರಬೇತಿ ಸಲಕರಣೆ ಗಳನ್ನು ತಾವೇ ಸ್ವತ: ಸಿದ್ಧಪಡಿಸಿದರು. ನಂತರ ನಾಡಿನಾದ್ಯಂತ ಗಡಿಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಶಿಶುವಿಹಾರ, ಪ್ರಾಥಮಿಕ,ಮಾಧ್ಯಮಿಕ ,ಪ್ರೌಢಶಾಲೆ , ಡಿ.ಎಡ್, ಬಿ.ಎಡ್, ಎಂ.ಎಡ್ ಕಾಲೇಜುಗಳಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ, ಪ್ರಾಧ್ಯಾಪಕರುಗಳಿಗೆ ಕನ್ನಡ ಕಲಿಕಾ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ ಶಾಲೆ, ಖಾಸಗಿ, ಅನುದಾನಿತ, ಸಂಚಾರಿ ಶಾಲೆ, ಟೆಂಟ್ ಶಾಲೆ, ಬಯಲು ಶಾಲೆ ಹೀಗೆ ಎಲ್ಲಾ ಬಗೆಯ ಶಾಲೆಗಳಲ್ಲಿಯೂ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಹಲವು ಗ್ರಾಮಗಳಲ್ಲಿ ವಯಸ್ಕರ ಶಿಕ್ಷಣ ಶಾಲೆ, ಪಟ್ಟಣ ಗಳಲ್ಲಿ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ಸುಲಭ ಬಗೆಯ ಭೋಧನೆ ನೀಡಿದ್ದಾರೆ. ಚಿತ್ರಕಲೆ, ಸಂಗೀತ, ಆಟ ,ಅಭಿನಯ, ಧಾರ್ಮಿಕತೆ, ನೈತಿಕತೆ, ಓರಿಗಾಮಿ, ಜಾದೂ, ಸಾಂಖ್ಯಿಕತೆ, ಚಮತ್ಕಾರ, ನಾಟಕ, ಕತೆ ಮುಂತಾದ ೧೪ ವಿವಿಧ ರೀತಿಯ ಕಲೆಗಳ ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಸುವ ಪ್ರಾತ್ಯಕ್ಷಿಕೆ ನೀಡುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದು 'ನಡೆದಾಡುವ ಶಿಕ್ಷಕ','ಅಕ್ಷರ ಚಕ್ರವರ್ತಿ','ಓಡಾಡುವ ನಾಡೋಜ' ,'ಸಕಲ ಕಲಾ ಶಿಕ್ಷಕ' ಎಂಬಿತ್ಯಾದಿ ಹಲವು ರೀತಿಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜತೆಗೆ ಇವರು ಕಾರ್ಯಕ್ರಮ ನೀಡಿರುವ ಸವಿನೆನಪಿಗಾಗಿ  ಶಿಕ್ಷಕರು, ಮಕ್ಕಳು, ಪೋಷಕರು ಸೇರಿ ರಾಜ್ಯದ 3021 ಶಾಲೆಗಳ ಅಂಗಳದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪರಿಸರದ ಉಳಿವಿಗೆ ಸ್ಪಂದಿಸಿದ್ದಾರೆ. ಶ್ರೀ ರುದ್ರಸ್ವಾಮಿ ಅವರು ಕೇವಲ ಶಾಲಾ ಮಕ್ಕಳಷ್ಟೇ ಅಲ್ಲದೆ ರಾಜ್ಯದ ಇತರ ಸಂಪನ್ಮೂಲ ಶಿಕ್ಷಕರಿಗೂ ಹಲವು ಕಾರ್ಯಾಗಾರಗಳನ್ನು ನಡೆಸಿ ರಾಷ್ಟ್ರಮಟ್ಟದ ಸಂಪನ್ಮೂಲ ಶಿಕ್ಷಕ ಎಂಬ ಗೌರವ ಗಳಿಸಿದ್ದಾರೆ. ನಾಡಿನ ಹಾಗೂ ಹೊರ ರಾಜ್ಯದ ಸುಮಾರು 56 ದೂರದರ್ಶನ ಕೇಂದ್ರಗಳಲ್ಲಿಯೂ ಇವರ ಕನ್ನಡ ಕಲಿಕಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪ್ರಸಾರಗೊಂಡಿದ್ದು ಹಲವು ಕಾರ್ಯಕ್ರಮಗಳು ಹತ್ತಕ್ಕೂ ಹೆಚ್ಚು ಬಾರಿ ಮರುಪ್ರಸಾರಗೊಂಡಿದೆ. ಹಲವು ಅನಿವಾಸಿ ಕನ್ನಡಿಗರು ಇವರ ಕಾರ್ಯಕ್ರಮಗಳನ್ನು ಚಿತ್ರೀಕರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರುದ್ರಸ್ವಾಮಿ ಯವರ ಶೈಕ್ಷಣಿಕ ವಿನೂತನ ಸಂಶೋಧನೆಗಳನ್ನು ಅಳವಡಿಸಿಕೊಂಡು ನಾಡಿನಲ್ಲಿರುವ 162 ಶಿಕ್ಷಕ / ಶಿಕ್ಷಕಿಯರು ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದ ಅತ್ಯುತ್ತಮ ಶಿಕ್ಷಕ ರೆಂಬುದಾಗಿ ಸನ್ಮಾನಿತಗೊಂಡಿರುತ್ತಾರೆ.

ಶ್ರೀ ರುದ್ರಸ್ವಾಮಿ ಯವರು ಶೈಕ್ಷಣಿಕವಾಗಿ ಸಂಶೋಧನೆ ನಡೆಸಿ 'ಅಕ್ಷರ ಚಿತ್ತಾರ ','ಅಕ್ಷರ ಮಂದಾರ','ಅಕ್ಷರ ಲಹರಿ' ಮುಂತಾದ ಶಿಕ್ಷಣ ಕ್ಷೇತ್ರಕ್ಕೆ ಅತ್ಯುಪಯುಕ್ತವಾದ 72 ಕೃತಿಗಳನ್ನು ರಚಿಸಿದ್ದಾರೆ. ಕರುನಾಡಿನ ಕಂದಮ್ಮಳೊಬ್ಬಳು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರಿಗೆ ಪತ್ರ ಬರೆದ ಪರಿಣಾಮ ಶ್ರೀ ಅಬ್ದುಲ್ ಕಲಾಮ್ ರವರು ಶ್ರೀ ರುದ್ರಸ್ವಾಮಿ ಯವರನ್ನು ಆಹ್ವಾನಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ಅವರಿಂದ ಕನ್ನಡದಲ್ಲಿಯೇ ಕಾರ್ಯಕ್ರಮ ಕೇಳಿ ನೋಡಿ ಸಂಭ್ರಮಿಸಿದ್ದಾರೆ. ಶ್ರೀ ರುದ್ರಸ್ವಾಮಿಯವರು ಈ ಮೂಲಕ ಮಾಜಿ ರಾಷ್ಟ್ರಪತಿ ಗಳಿಂದ ಆಹ್ವಾನಿತಗೊಂಡ ಆರು ಕೋಟಿಗೊಬ್ಬ ಶಿಕ್ಷಕ ನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ನಾಡಿನ ಅನೇಕ ಶೈಕ್ಷಣಿಕ ಸಂಘ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು , ಮಠಾಧೀಶರು, ಸಂಸ್ಥೆಗಳು ಇವರ ಕನ್ನಡ ಸೇವೆ ಗುರುತಿಸಿ ಸನ್ಮಾನಿಸಿದ್ದಾರೆ. ಕನ್ನಡ ಭಾಷಾ ಸುಲಭ ಕಲಿಕೆ ಮತ್ತು ವಿನೂತನ ಚಿತ್ರಕಾವ್ಯ ಕಲಾ ಪ್ರದರ್ಶನಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದು ಲಕ್ಷಾಂತರ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರುದ್ರಸ್ವಾಮಿಯವರ ನಾಡಿನ ಮತ್ತು ಸಾಮಾಜಿಕ ಕಾಳಜಿ ಇಷ್ಟಕ್ಕೆ ನಿಲ್ಲುವುದಿಲ್ಲ. ಕಳೆದ ಉತ್ತರ ಕರ್ನಾಟಕ ನೆರೆಯ ಸಂದರ್ಭದಲ್ಲಿ ಬೀದಿಗೆ ಬಿದ್ದಿದ್ದ ಸುಮಾರು 25 ಬುದ್ಧಿಮಾಂದ್ಯ ಮಕ್ಕಳನ್ನು ಕರೆದೊಯ್ದು ಅವರಿಗೆ ದಾವಣಗೆರೆಯಲ್ಲಿ ವಸತಿ ವ್ಯವಸ್ಥೆ ಮಾಡಿ, ಅವರ ಪಾಲನೆ ಪೋಷಣೆ , ಸಂರಕ್ಷಣೆ ಮಾಡುತ್ತಿದ್ದಾರೆ. ಇಂಥಹ ಕ್ರಿಯಾಶೀಲ, ಸಾಮಾಜಿಕ ಕಾಳಜಿಯ ಕನಸುಗಾರನಿಗೆ ಈ ಬಾರಿಯ ಸಮಾಜ  ಸೇವಕರ ಸಮಿತಿಯ ಗೌರವ.
 
ಸದ್ದಿಲ್ಲದೇ ಭಾರತ ಕಟ್ಟುತ್ತಿರುವ ಕರ್ನಾಟಕದ ಕನಸುಗಾರ ಡಾ|| ಹರೀಶ್ ಹಂದೆ, ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಗೆ ಮ್ಯಾಗ್ಸೆಸ್ಸೆ ಅವಾರ್ಡ್   

ಡಾ.ಹರೀಶ್ ಹಂದೆ , ನೀಲಿಮಾ ಮಿಶ್ರಾ : ಮೊನ್ನೆ ಮ್ಯಾಗ್ಸೆಸ್ಸೆ ಅವಾರ್ಡ್ ಬರುವವರೆಗೆ ಈ ಹೆಸರುಗಳು  ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಇವರು ಕೂಡಾ ಒಬ್ಬರು.

ತಂತ್ರಜ್ಞಾನದ ಮೂಲಕ ಲಕ್ಷಾಂತರ ದೇಶವಾಸಿಗಳ ಬದುಕಲ್ಲಿ ಬೆಳಕು ತಂದ ಕರ್ನಾಟಕದ ಡಾ|| ಹರೀಶ್ ಹಂದೆ ಹಾಗೂ ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಈ ಬಾರಿಯ ಪ್ರತಿಷ್ಟಿತ ಮ್ಯಾಗ್ಸೆಸ್ಸೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸೌರ ಶಕ್ತಿಯನ್ನು ಉಪಯೋಗಿಸಿ ೨ ಲಕ್ಷಕ್ಕೂ ಅಧಿಕ ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಸೌರ ವಿದ್ಯುತ್ ನೀಡಿರುವ ಕರ್ನಾಟಕದ ಸೆಲ್ಕೋ ಇಂಡಿಯಾ ಕಂಪನಿಯ ಸಂಸ್ಥಾಪಕ ಡಾ.ಹರೀಶ್ ಹಂದೆ ಹಾಗೂ ಸಾವಿರಾರು ಗ್ರಾಮೀಣರನ್ನು ಸಂಘಟಿಸಿ ಅವರಲ್ಲಿ ಅರಿವು ಮೂಡಿಸಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಿ, ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣ ವಾಗಿರುವ 'ಭಗಿನಿ ನಿವೇದಿತಾ ಗ್ರಾಮ ವಿಜ್ಞಾನ ನಿಕೇತನ್' ಸಂಸ್ಥೆಯ ಸಂಸ್ಥಾಪಕಿ ನೀಲಿಮಾ ಮಿಶ್ರಾ ರಿಗೆ ಮ್ಯಾಗ್ಸೆಸ್ಸೆ ಅವಾರ್ಡ್ ನೀಡುವ ಮೂಲಕ ಪ್ರಶಸ್ತಿ ತನ್ನ ಮೌಲ್ಯವನ್ನೇ ಹೆಚ್ಚಿಸಿಕೊಂಡಿದೆ ಎನ್ನಬಹುದು.

ಡಾ.ಹರೀಶ್ ಹಂದೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಂದಟ್ಟು ಗ್ರಾಮದಲ್ಲಿ ಜನಿಸಿದ ಹರೀಶ್ ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಅಮೆರಿಕಾದ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ ನಡೆಸಿ ಅದೇ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು. ಅವರ ಹಲವು ವರ್ಷಗಳ ಸಂಶೋಧನೆ, ಕನಸುಗಳ ಪರಿಣಾಮವಾಗಿ ಆರಂಭಗೊಂಡಿದ್ದು ಅವರ ’ಸೆಲ್ಕೊ ಇಂಡಿಯಾ ಕಂಪನಿ’. ದೇಶದ ಬಡಜನರ ಕುರಿತ ಅವರ ಕಾಳಜಿ ವಿಶೇಷವಾದದ್ದು, ಹಾಗಾಗಿಯೇ ಸೆಲ್ಕೊ ಬಡಜನರಿಗಾಗಿಯೇ ಅತ್ಯಂತ ಕಡಿಮೆ ವೆಚ್ಚದ ಸೌರ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಸೌರಶಕ್ತಿಯ ವಿದ್ಯುತ್ ಅನ್ನು ಬಡವರಿಗೆ ತಲುಪಿಸುವುದು, ಅದಕ್ಕೆ ಹಲವಾರು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವುದು, ಆ ಆರ್ಥಿಕ ಸಹಾಯ ತೀರುವವರೆಗೂ ಅದು ಅವರಿಗೆ ಹೊರೆಯಾಗದಂತೆ ಬೆಂಬಲ ನೀಡುವುದು, ಒಟ್ಟಾರೆಯಾಗಿ ಭಾರತದ ಬಡ ಗ್ರಾಮೀಣ ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರವಿದ್ಯುತ್‌ನ ಪ್ರಯೋಜನಗಳು ತಲುಪುವಂತೆ ಮಾಡುವುದು ಸೆಲ್ಕೊನ ಪ್ರಮುಖ ಉದ್ದೇಶ. 

ಡಾ||ಹರೀಶ್‌ರ ದೂರದೃಷ್ಟಿತ್ವದಿಂದಾಗಿ ಸೆಲ್ಕೊ ಈ ಕಾರ್ಯದಲ್ಲಿ ಅಪರಿಮಿತ ಯಶಸ್ಸು ಗಳಿಸಿದೆ. ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ೧,೨೫,೦೦oಕ್ಕೂ ಅಧಿಕ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ರೈತರು ಸೌರಶಕ್ತಿಯ ವಿದ್ಯುತ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಹೊಂದಿರುವ ಸೆಲ್ಕೋ ಪ್ರಸ್ತುತ ೨೫ ಶಾಖೆಗಳನ್ನು ಹೊಂದಿದೆ. ೨೦೦೫ ರ ’ಆಶ್‌ಡೆನ್ ಅವಾರ್ಡ್’ ಪ್ರಶಸ್ತಿಗೆ ಭಾಜನರಾಗಿರುವ ಡಾ|| ಹರೀಶ್ ಹಂದೆ ದೇಶದ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಈ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

"ಕೇವಲ ಸಾಫ್ಟ್ ವೇರ್ ಇಂಜಿನಿಯರ್ ಗಳ ಸಂಖ್ಯೆ ಹೆಚ್ಚಿದರೆ, ಐ.ಟಿ ಕಂಪನಿಗಳು ಹೆಚ್ಚಿದರೆ, ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾದ ಮಾತ್ರಕ್ಕೆ ಕರ್ನಾಟಕ ಅಭಿವೃದ್ಧಿ ಹೊಂದಿದೆ ಎಂದು ಹೇಳಲಾಗದು. ಗ್ರಾಮೀಣ ಪ್ರದೇಶದಲ್ಲಿರುವ ಜನರ ಬದುಕು ಬೆಳಗುವಂತಾಗಬೇಕು. ಹಾಗಾದಲ್ಲಿ ಮಾತ್ರ ಒಂದು ರಾಜ್ಯ ಅಥವಾ ದೇಶ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ ಎನ್ನಬಹುದು. ಗ್ರಾಮೀಣ ಪ್ರದೇಶದ ಜನರ ಮೂಲಭೂತ ಸೌಕರ್ಯಗಳಿಗಾಗಿ ಶ್ರಮಿಸುವುದೇ ನನ್ನ ಗುರಿ " ಎಂದಿದ್ದಾರೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಹರೀಶ್ . ಸ್ವತಃ ಗ್ರಾಮೀಣ ಬಡ ಕುಟುಂಬದಿಂದ ಬಂದಿರುವ ಡಾ||ಹರೀಶ್ ಹಂದೆ 'ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ. ಬಡವರ ಮನೆ ಬೆಳಗುವುದೇ ನನ್ನ ಗುರಿ. ಆ ಪ್ರಯತ್ನಕ್ಕೆ ಪ್ರೋತ್ಸಾಹ ವೆಂಬಂತೆ ಈ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯನ್ನು ನನ್ನ ಸೆಲ್ಕೋ ಕಂಪನಿಯ ಎಲ್ಲ ಉದ್ಯೋಗಿ ಮಿತ್ರರಿಗೆ ಅರ್ಪಿಸುತ್ತಿದ್ದೇನೆ' ಎಂದಿದ್ದಾರೆ.  'ನಗರದ ಯುವಕರು ಸಾಮಾಜಿಕ ಕಳಕಳಿಯನ್ನು ಮರೆತಿದ್ದಾರೆ. ಎಲ್ಲರಿಗೂ ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್ ಆಗುವುದೇ ದೊಡ್ಡ ಗುರಿ. ಸಾಮಾಜಿಕ ಕಾಳಜಿ ಇರುವವರ ಸಂಖ್ಯೆ ಕಡಿಮೆಯಾಗುತ್ತಿದೆ' ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಹರೀಶ್.

ನಮ್ಮ ಖುಷಿಯೆಂದರೆ ಹರೀಶ್ ನಮ್ಮ ಕನ್ನಡದವರು. ಉಡುಪಿ ಜಿಲ್ಲೆಯ ಕೋಟ ದವರು. ಕಳೆದ ೩ ವರ್ಷಗಳ ಹಿಂದೆಯೇ ನಮ್ಮ ಚೈತ್ರರಶ್ಮಿಯಲ್ಲಿ ಹರೀಶರ ಬಗ್ಗೆ ನಾನು ಬರೆದಿದ್ದೆ.(ಲೇಖನ ಕೆಳಗಿದೆ). 

ನೀಲಿಮಾ ಮಿಶ್ರಾ
ನೀಲಿಮಾ ಮಿಶ್ರಾ ಕೂಡಾ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಮಹಾರಾಷ್ಟ್ರದ ಭಹದರ್ ಪುರ ಗ್ರಾಮದಲ್ಲಿ ಜನಿಸಿದ ನೀಲಿಮಾ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗಳು.  ಪುಣೆ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ನೀಲಿಮಾ ನಂತರ ತಮ್ಮ ಸಂಪೂರ್ಣ ಬದುಕನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟಿದ್ದಾರೆ. ವೈವಾಹಿಕ ಬಂಧನಕ್ಕೆ ಒಳಗಾಗದೆ ಸಂಪೂರ್ಣ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೀಲಿಮಾ 'ಭಗಿನಿ ನಿವೇದಿತಾ ಗ್ರಾಮೀಣ ವಿಜ್ಞಾನ ನಿಕೇತನ್' ಸಂಸ್ಥೆಯನ್ನು  ಸ್ಥಾಪಿಸಿ ಸಾವಿರಾರು ಗ್ರಾಮೀಣರ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದಾರೆ. ಬ್ಯಾಂಕ್ ಗಳಿಂದ, ಖಾಸಗಿ ಲೇವಾದೇವಿ ಗಾರರಿಂದ ಬಡ್ಡಿಗೆ ಸಾಲ ಪಡೆದು ನಂತರ ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದ ಗ್ರಾಮೀಣ ರೈತರು ಹಾಗೂ ಮಹಿಳೆಯರನ್ನು ಸಂಘಟಿಸಿ ಸ್ವಸಹಾಯ ಗುಂಪುಗಳನ್ನು ರಚಿಸಿ ರೈತರೇ ರೈತರಿಗೆ ನೆರವಾಗುತ್ತ ಆರ್ಥಿಕವಾಗಿ ಸಬಲರಾಗುವಂತೆ , ಸಂಘತಿತರಾಗುವಂತೆ, ಸಶಕ್ತರಾಗುವಂತೆ ಮಾಡಿದ ಸಾಧನೆ ನೀಲಿಮಾರದ್ದು. ಅಷ್ಟೇ ಅಲ್ಲ ರೈತರು ಮತ್ತು ಮಹಿಳೆಯರು ಸ್ವ-ಉದ್ಯೋಗಗಳನ್ನು, ಗೃಹ ಕೈಗಾರಿಕೆಗಳನ್ನು ಆರಂಭಿಸುವಂತೆ ಪ್ರೋತ್ಸಾಹಿಸಿ ಇಂದು ಅದರ ಮೂಲಕ ಸಾವಿರಾರು ಮಂದಿ ಉದ್ಯೋಗ ಪಡೆಯುವಂತೆ ಮಾಡಿ ಒಂದು ಸ್ವಾವಲಂಬಿ ಗ್ರಾಮ ನಿರ್ಮಾಣ ಮಾಡಿದ ಖ್ಯಾತಿ ನೀಲಿಮಾ ಮಿಶ್ರಾ ಅವರದ್ದು. ಭಹದರ್ ಪುರ ಗ್ರಾಮದಲ್ಲಿ ಅವರು ಪ್ರತಿಯೊಬ್ಬರಿಗೂ ದೀದಿ ಎಂದೇ ಪರಿಚಿತರು. ಮಹಾರಾಷ್ಟ್ರದ ಇತೆರೆಡೆಯ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದರೆ ಭಹದರ್ ಪುರ ದ ರೈತರು ಮಾತ್ರ ಬ್ಯಾಂಕ್ ಗಳಿಂದ , ಲೇವಾದೇವಿ ಗಾರರಿಂದ ಸಾಲ ಪಡೆಯುವ ಗೋಜಿಗೆ ಹೋಗದೆ ತಮ್ಮಲ್ಲೇ ತಾವು ನೆರವಾಗುತ್ತ ಸ್ವಾವಲಂಬಿಗಳಾಗಿ ದೇಶದ ಮಾದರಿ ಹೆಮ್ಮೆಯ ಗ್ರಾಮವಾಗಲು ನೀಲಿಮಾ ರ ಪ್ರಯತ್ನ ಅಸಾಧಾರಣವಾದುದು. ಹಾಗಾಗಿಯೇ ಮ್ಯಾಗ್ಸೆಸ್ಸೆ ಅವಾರ್ಡ್ ಅವರನ್ನು ಹುಡುಕಿ ಬಂದಿದೆ. 

ಸದ್ದಿಲ್ಲದೆ, ಸುದ್ದಿಯ ಹಂಗಿಗೆ ಬೀಳದೆ ’ಭಾರತ’ ಕಟ್ಟುತ್ತಿರುವ ಇಂತಹ ಲಕ್ಷಾಂತರ ಮಹನೀಯರಿಗೆ ನಮ್ಮ ನಮನ. ಇಂತವರ ಸಂಖ್ಯೆ ಸಾವಿರವಾಗಲಿ ಎಂದು ಆಶಿಸೋಣ.


ಹರೀಶ್, ನೀಲಿಮಾ : ಹಳ್ಳಿಜನರ ಹಾಗೂ ಬಡವರ ಬಗೆಗಿನ ನಿಮ್ಮ ಕಾಳಜಿಗೆ ಹ್ಯಾಟ್ಸ್ ಆಫ್. ನಿಮ್ಮ ಸಾಧನೆಗೆ ಅಭಿನಂದನೆಗಳು. 


ಎರಡು ವರ್ಷಗಳ ಹಿಂದೆ ಚೈತ್ರರಶ್ಮಿಯಲ್ಲಿ ಹರೀಶ್ ಹಂದೆ ಬಗ್ಗೆ ನಾನು ಬರೆದ ಲೇಖನ


ಕನ್ನಡಪ್ರಭದಲ್ಲಿ ಹರೀಶ್ ಸಂದರ್ಶನ 


ಹೀಗೊಂದು ಆತ್ಮವಿಶ್ವಾಸದ ಸ್ವಗತವು......

ಹೌದು, ಕಳೆದ ಕಷ್ಟದ ದಿನಗಳು ಬದುಕಿನ ಅತ್ಯುನ್ನತ ಪಾಠ ಕಲಿಸಿದೆ. ಬದುಕೀಗ ಮತ್ತೆ 'ಜೀವನ್ಮುಖಿ'. ಕಳೆದ ಸಂಕಟಗಳು ಬದುಕಿನ 'ಅಂಟಿಕೊಳ್ಳದ ಚಿತ್ರಗಳು' ಅಷ್ಟೇ. 'ಕನ್ನಡಿ ಬಿಂಬದ ನೆರಳಿನಲ್ಲೀಗ' ಉತ್ಸಾಹದ ಪ್ರತಿಫಲನ. ಬಂದದ್ದೆಲ್ಲವನ್ನೂ ಖುಷಿಯಿಂದ ಸ್ವೀಕರಿಸಿದ್ದೇನೆ. 'ಉಳಿಸಿಲ್ಲ ನಾನೇನನ್ನೂ ಕಲ್ಲಿನ ಹೃದಯದಂತೆ''ಕತ್ತಲ ಗರ್ಭದ ಮಿಂಚು' ಸುಳಿದು ಹೋದ ಮೇಲೆ ಸಂಕಟ, ಸಂಭ್ರಮ ಬದುಕಿಗೀಗ ಎಲ್ಲವೂ 'ಸ್ಪ್ರುಶ್ಯ' ವೇ. ಜೀವನಯಾನದ 'ತೆರೆಬಾರದ ತೀರದಲ್ಲಿ ಮೂಡಿದ ಹೆಜ್ಜೆಗುರುತು'ಗಳನ್ನು ನಾನೆಂದಿಗೂ ಮರೆಯಲಾರೆ. ಕಾಲವೆಂಬೋ ನದಿಯ ಸೆಳವಿನಲ್ಲಿ ಬದುಕಿನ ಸಂಕಟಗಳ ಸಾವಿರ ಕಲ್ಮಶಗಳು ತೊಳೆದುಹೋಗಿ ಅಲ್ಲೀಗ 'ಒಲವಿನ ಚಿಟ್ಟೆಯ ಕಂಬಳಿ ಹುಳು' ಮೆಲ್ಲನೆ ಮಿಸುಕಾಡುತ್ತಿದೆ. ಅದೀಗ ನನ್ನಕ್ಕರೆಯ ಬಳಗದ ಗೆಳೆಯರ ಮುಖದ ಮೇಲೆ ಮಂದಹಾಸದ ಚಿಟ್ಟೆಯಾಗಿ ಹಾರುತ್ತಾ ನನ್ನೊಳಗೊಂದು ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತಿದೆ. ನನ್ನೊಲವಿನ ಬಳಗದ ಗೆಳೆಯರ ಸಾಧನೆಯ ಸಂತಸದಲ್ಲಿ ನಾನೂ ನನ್ನ ಕನಸೂ ಸಂಭ್ರಮಿಸುತ್ತಿದ್ದೇವೆ. ಮತ್ತೀಗ ಅದು ನನ್ನೊಳಗೆ 'ನಾನು ಸೋಲುವುದಿಲ್ಲ, ಸೋತರದು ನಾನಲ್ಲ' ಎಂಬ ಆತ್ಮವಿಶ್ವಾಸದ ಉಜ್ವಲ ಭಾವವೊಂದನ್ನು ಸೃಷ್ಟಿಸುತ್ತಿದೆ. ಹೌದು, ನಾವು ಸೋಲುವುದಿಲ್ಲ, ಯಾರೂ ಸೋಲುವುದು ಬೇಡ. ಭಾವಯಾನ ನಮ್ಮೆಲ್ಲರನು ಗೆಲ್ಲಿಸಲಿ, ಜೀವನಕ್ಕೊಂದು ಸಮೃದ್ಧಿ ತರಲಿ.
"ನಾನು  ಸೋಲುವುದಿಲ್ಲ , ಸೋತರದು ನಾನಲ್ಲ"  --ರಾಚಂ