Monday 1 August 2011

ಆಗಸ್ಟ್ ೧: ಇಂದು 'ಸಮಾಜ ಸೇವಕರ ದಿನ' 

ನಮ್ಮ 'ಸಮಾಜ ಸೇವಕರ ಸಮಿತಿ' ಗೆ  ಒಂಭತ್ತರ ಸಂಭ್ರಮ : ಇಬ್ಬರು ನಿಸ್ವಾರ್ಥ ಸಮಾಜ ಸೇವಕರಿಗೆ ಸನ್ಮಾನ...

ಇಂದು ಸಮಾಜ ಸೇವಕರ ದಿನ. ಅಪ್ಪಂದಿರ, ಅಮ್ಮಂದಿರ ದಿನ, ಪ್ರೇಮಿಗಳ ದಿನ....ಹೀಗೆ ಎಲ್ಲರಿಗೂ ಒಂದು ದಿನ ಇರುವಾಗ ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವ ಮಹನೀಯರನ್ನು ಸ್ಮರಿಸಲು, ಗೌರವಿಸಲು, ಅವರ ಕಾರ್ಯದಿಂದ ನಾವು ಸ್ಪೂರ್ತಿ ಪಡೆಯಲು ಒಂದು ದಿನ ಬೇಕು ಅಂತ ಆಲೋಚಿಸಿ ಸಮಾಜ ಸೇವಕರ ಸಮಿತಿಯ ಗೆಳೆಯರು ಕಳೆದ ೮ ವರ್ಷಗಳಿಂದ ಆಗಸ್ಟ್ ೧ ರ ಈ ದಿನ 'ಸಮಾಜ ಸೇವಕರ ದಿನಾಚರಣೆ' ಯನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ. ಅಂದು ಸದ್ದಿಲ್ಲದೇ, ಸುದ್ದಿಯ ಹಂಗಿಲ್ಲದೆ ಸಮಾಜದ ಕೆಲಸ ಮಾಡುತ್ತಿರುವ ಮಹನೀಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ೨೫ ಅಂತಹ ವಿಶಿಷ್ಟ ಮಹನೀಯರನ್ನು ಸಮಿತಿ ಗೌರವಿಸಿದೆ. ಈ ಬಾರಿ ಬೆಂಗಳೂರಿನ ಜಲನಿರ್ವಹಣಾ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದ ಜಲತಜ್ಞ ಶ್ರೀ ತಿಪ್ಪೇಸ್ವಾಮಿ ಹಾಗೂ ಕಾಲ್ನಡಿಗೆಯಲ್ಲೇ ಗಡಿಭಾಗದ 6048 ಕನ್ನಡ ಶಾಲೆಗಳಿಗೆ ಭೇಟಿ ನೀಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಪಾಠ ಮಾಡಿ ಮಕ್ಕಳ ಹೃದಯ ಗೆದ್ದು 'ನಡೆದಾಡುವ ಶಿಕ್ಷಕ' ಎಂಬ ಗೌರವಕ್ಕೆ ಪಾತ್ರರಾಗಿರುವ ಶ್ರೀ ರುದ್ರಸ್ವಾಮಿ ಅವರನ್ನು ಸಮಿತಿ 'ಸಮಾಜ ಸೇವಕರ ದಿನ' ವಾದ ಇಂದು ಬೆಂಗಳೂರಿನ ಜೆ.ಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವಿಸುತ್ತಿದೆ. ಸನ್ಮಾನಿತರ ಕಿರು ಪರಿಚಯ:

ಶ್ರೀ ತಿಪ್ಪೇಸ್ವಾಮಿ:

ಶ್ರೀ ತಿಪ್ಪೇಸ್ವಾಮಿ
ಮಠದ ನಾಗೇಂದ್ರಯ್ಯ ತಿಪ್ಪೇಸ್ವಾಮಿ, ಮೂರ್ತಿ 
ಚಿಕ್ಕದಾದರೂ ಕೀರ್ತಿದೊಡ್ಡದು ನಾಣ್ಣುಡಿಗೆ ಅನ್ವರ್ಥ. ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಯೋಜನೆಗಳ ಪ್ರಸ್ತಾಪವಾದಾಗಲೆಲ್ಲ ತಟ್ಟನೆ ನೆನಪಿಗೆ ಬರುವ ಹೆಸರು.ಬೆಂಗಳೂರು ಜಲಮಂಡಲಿ ಇಂದು ದೇಶ-ವಿದೇಶಗಳಲ್ಲಿ ಹೆಸರು ಮಾಡಿ ಕುಡಿಯುವ ನೀರು ಪೂರೈಕೆ ಹಾಗೂ ಗ್ರಾಹಕ ಸೇವೆಗಾಗಿ ರಾಷ್ಟ್ರೀಯ -ಅಂತಾರಾಷ್ಟ್ರೀಯ  ಪ್ರಶಸ್ತಿ-ಮಾನ್ಯತೆ ಪಡೆದುಕೊಂಡಿದ್ದರೆ ಅದರಲ್ಲಿ ಶ್ರೀ ಎಂ.ಎನ್.ತಿಪ್ಪೇಸ್ವಾಮಿಯ ಸುಮಾರು ಮೂರು ದಶಕಗಳ  ನಿಷ್ಕಾಮ ಪರಿಶ್ರಮ ಪೂರ್ವಕ ಸೇವೆಯ ಪಾಲೂ ಗಮನಾರ್ಹ.

೭೦ ರ ದಶಕದಲ್ಲಿ ಜಲ ಮಂಡಲಿಯ ಇಂಜಿನೀಯರ್ ಆಗಿ ಸೇವೆ ಆರಂಭಿಸಿ, ಅದರ ಯೋಜನಾ ಮುಖ್ಯ ಅಭಿಯಂತರಾಗಿ ನಿವೃತ್ತರಾಗುವವರೆಗೂ ಅವರು ಸಲ್ಲಿಸಿದ ಸೇವೆ ಆಧುನಿಕ ಬೆಂಗಳೂರು ಮಹಾನಗರದ ಬಹು ಜ್ವಲಂತ ನಾಗರಿಕ ಸಮಸ್ಯೆಯಾದ ಸಮರ್ಪಕ ನೀರು ಪೂರೈಕೆ ಯಶೋಗಾಥೆಯ ಬಹು ಮಹತ್ವದ ಅಧ್ಯಾಯ.

ಕುಡಿವ ನೀರು ಪೂರೈಕೆ ಹಾಗೂ ನೈರ್ಮಲ್ಯ ನಿರ್ವಹಣೆಯ ತಳಮಟ್ಟದ ನಿರ್ವಹಣೆ-ನಿಭಾವಣೆಯಿಂದ ಹಿಡಿದು ಅದರ ಯೋಜನೆ, ಕಾರ್ಯನುಷ್ಠಾನದವರೆಗೆ ತಿಪ್ಪೇಸ್ವಾಮಿಯವರ ಪರಿಣತ ಅನುಭವದ ವ್ಯಾಪ್ತಿ-ವಿಸ್ತಾರ..

ಬೆಂಗಳೂರು ನಗರಕ್ಕೆ ಕಾವೇರಿ ನೀರು ತರುವ ಬೃಹತ್ ಯೋಜನೆಗಳಿಂದ ಹಂತ-೧ ಹಾಗೂ ಹಂತ-೨ ರ ಸಂಪೂರ್ಣ ಯೋಜನಾ ವರದಿ ತಯಾರಿಕೆ,ನೈರ್ಮಲ್ಯ ಯೋಜನೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ. ಎರಡನೆ ಹಂತದ ಯೋಜನೆಗೆ ಜಪಾನಿನ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಜೆಬಿಐಸಿ ಯಿಂದ ನೆರವು ಪಡೆದುಕೊಳ್ಳುವುದರಲ್ಲಿ ತಿಪ್ಪೇಸ್ವಾಮಿಯವರ ಪಾತ್ರ ಗಮನಾರ್ಹ. ಇದಲ್ಲದೆ ಆಸ್ಟ್ರೇಲಿಯ ಸರ್ಕಾರದ ನೆರವುಯೋಜನೆ,ಪ್ರೆಂಚ್ ನೆರವಿನ ಯೋಜನೆಗಳಲ್ಲೂ ಅವರ ಪಾತ್ರ ಉಲ್ಲೇಖನೀಯ.೧೯೯೭-೯೯ ರಲ್ಲಿ ಕಾರ್ಪೋರೆಟ್ ಪ್ಲಾನಿಂಗ್ ವಿಭಾಗದ ಸೂಪರಿಂಟೆಂಡಿಂಗ್ ಇಂಜಿನಿಯರ್ ಹಾಗೂ ೧೯೯೯-೨೦೦೩ ವರೆಗೆ ಕಲುಶಿತ ನೀರು ನಿರ್ವಹಣಾ ಚೀಫ್ ಇಂಜಿನಿಯರ್ .೨೦೦೩-೨೦೦೫ ರಲ್ಲಿ ಮುಖ್ಯ ಇಂಜಿನಿಯರ್ ಹಾಗೇ ೩೪ ವರ್ಷಗಳ ಬೆಂಗಳೂರು ಜಲಮಂಡಲಿಯ ಪ್ರಗತಿಯೊಡನೆ ತಿಪ್ಪೇಸ್ವಾಮಿಯವರ ಸೇವೆ ಹಾಸುಹೊಕ್ಕಾಗಿದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ-ಜಿ ಐ ಎಸ್ ಯನ್ನು ಕುಡಿಯುವನೀರಿನ ಕ್ಷೇತ್ರದಲ್ಲಿ ಅಳವಡಿಸಿದ ಕೀರ್ತಿ ತಿಪ್ಪೇಸ್ವಾಮಿಯವರಿಗೆ ಸಲ್ಲುತ್ತದೆ.ಇದು ದೇಶದಲ್ಲೇ ಮೊದಲ ಪ್ರಯೋಗವಾಯಿತು. ಹಾಗೆಯೇ ಕಲುಶಿತ ನೀರಿನ ಮರು ಬಳಕೆ ವಿಧಾನಗಳ ಸ್ಥಾವರವನ್ನು ಯಲಹಂಕ ಮತ್ತಿತರ ಕಡೆ ಸ್ಥಾಪಿಸುವುದರಲ್ಲೂ ಇವರ ಪಾತ್ರ ಪ್ರಮುಖವಾಗಿದೆ. ೨೦೦೫ ರಲ್ಲಿ ನಿವೃತ್ತಿ ಹೊಂದಿದ ಮೇಲೂ ತಿಪ್ಪೇಸ್ವಾಮಿ ಕುಡಿವ ನೀರಿನ ಯೋಜನೆಗಳಲ್ಲಿ ತೀವ್ರ ಆಸಕ್ತ. ಮಲೇಶಿಯ, ಸಿಂಗಪುರ್, ಆಸ್ಟ್ರೇಲಿಯ, ಜಪಾನ್, ಯುರೋಪ್, ಅಮೇರಿಕಗಳಿಗೆ ಹಲವಾರು ಬಾರಿ ಅಧ್ಯಯನ ಪ್ರವಾಸ ಕೈಗೊಂಡಿರುವ ಅವರು ಈವರೆಗೆ ಸುಮಾರು ೩೫೦ ತಾಂತ್ರಿಕ ಪ್ರಬಂಧಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ಗೋಷ್ಠಿಗಳಲ್ಲಿ ಸಾದರಪಡಿಸಿದ್ದಾರೆ.ಬೆಂಗಳೂರು ,ದಿಲ್ಲಿ,ಯು.ಕೆ,ಆಸ್ಟ್ರೇಲಿಯಗಳ ಹಲವಾರು ಉನ್ನತ ಮಟ್ಟದ ತಾಂತ್ರಿಕ ಸಂಘಗಳ ವೃತ್ತಿಸದಸ್ಯರಾಗಿ ಕುಡಿವ ನೀರಿನ ಕ್ಷೇತ್ರದಲ್ಲಿ ಅವರು ಸಲಹೆಗಾರರಾಗಿದ್ದಾರೆ ಹಲವಾರು ಸಂಘ-ಸಂಸ್ಥೆಗಳಿಗೆ ರಾಜ್ ಕೋಟೆ,ಚೆನ್ನೈ,ತಿರುವನಂತಪುರ ನಗರ ಯೋಜನೆಗಳ ಸಲಹೆಗಾರರು ಹೌದು.

ಬೆಂಗಳೂರಿನಲ್ಲಿ ಜಲ ಸಾಕ್ಷರತೆ ಪ್ರಚುರ ಪಡಿಸಲು ಹಲವಾರು ಕನಸುಗಳನ್ನ್ನು ಈಗಲೂ ಹೋಂದಿರುವ ತಿಪ್ಪೇಸ್ವಾಮಿ
ವಿದೇಶಗಳಲ್ಲಿರುವಂತೆ 'ಜಲಮ್ಯೂಸಿಯಂ' ಸ್ಥಾಪನೆ, ಸರ್ಕಾರ ಮುಂದೆ ಬಂದರೆ ತಮ್ಮ ಪರಿಣತಿಯನ್ನು ನೀಡಲು ಉತ್ಸುಕರಾಗಿದ್ದಾರೆ.

ಅವರ ಪರಿಣತಿ ,ಅನುಭವ ಗಮನಿಸಿ ಕರ್ನಾಟಕ ಸರ್ಕಾರ ಅವರನ್ನು ರಾಷ್ಟ್ರೀಯ ಕೆರೆ ಸಂರಕ್ಷಣಾ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ದಿ ಯೋಜನೆ ತಾಂತ್ರಿಕ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿತು.
ಕುಡಿಯುವ ನೀರಿನ ಪ್ರಸ್ತಾಪವಾದಾಗಲೆಲ್ಲ ಇಂದಿಗೂ ಬತ್ತದ ಉತ್ಸಾಹ. ವಿಸ್ತಾರಗೊಂಡ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಜಲನಿರ್ವಹಣೆ ಕುರಿತ ಅವರ ಪ್ರೌಢ ಅಧ್ಯಯನ ವರದಿ ಮುಂದಿನ ೨೫ ವರ್ಷಗಳಲ್ಲಿ ನಗರ ನೀರಿನ ನಿರ್ವಹಣೆ ಕುರಿತ ಕೈಪಿಡಿ.

ನಾಗರಿಕರಿಗೆ ಸುರಕ್ಷಿತ ಕುಡಿವ ನೀರು ಪೂರೈಕೆ ತಿಪ್ಪೇಸ್ವಾಮಿಯವರ ಸಾಮಾಜಿಕ ಸೇವೆಯ ದೀಕ್ಷೆ ಕೇವಲ ಸರ್ಕಾರಿ ಇಂಜಿನಿಯರ್ ದೃಷ್ಟಿ ಮಾತ್ರವಲ್ಲ. ಆದ್ದರಿಂದಲೇ ಇಂದು  ಅವರನ್ನು ಅರಸಿ ಬಂದಿರುವುದು ಇಂದಿನ ಸಮಾಜ ಸೇವಕರ ಸಮಿತಿ ತೆರೆಮೆರೆ ಸಾಧಕನನ್ನು ಗುರುತಿಸಿ ನೀಡುತ್ತಿರುವ ಪುರಸ್ಕಾರ.
(ಪರಿಚಯ ಕೃಪೆ: ಶ್ರೀ ಕೆ.ಎಸ್.ಅಚ್ಯುತನ್ , ಹಿರಿಯ ಪತ್ರಕರ್ತರು)

ಶ್ರೀ ರುದ್ರಸ್ವಾಮಿ: 

ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ರಾಜ್ಯವನ್ನು
ಶ್ರೀ ರುದ್ರಸ್ವಾಮಿ
ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಮಾಡಿ ಗಡಿ ಭಾಗದ ೬೦೪೮ ಶಾಲೆಗಳಲ್ಲಿ ’ಕನ್ನಡಭಾಷಾ ಸುಲಭ ಕಲಿಕಾ ಪ್ರಾತ್ಯಕ್ಷಿಕೆ’ ನೀಡಿ ನಾಡಿನ ಲಕ್ಷಾಂತರ ಮಕ್ಕಳ ಹೃದಯ ಗೆದ್ದು ’ನಡೆದಾಡುವ ಶಿಕ್ಷಕ’ ಎಂಬ ಖ್ಯಾತಿಗೆ ಪಾತ್ರರಾಗಿರುವವರು ಶ್ರೀ ರುದ್ರಸ್ವಾಮಿ. ೧೯೮೦ ರಲ್ಲಿ ಕನಪುರದಲ್ಲಿ ಜನಿಸಿದ ರುದ್ರಸ್ವಾಮಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕನಕಪುರದಲ್ಲಿ ಮುಗಿಸಿ ನಂತರ ತಮ್ಮ ಕಾಲೇಜು ಶಿಕ್ಷಣವನ್ನು ಸಿದ್ಧಗಂಗಾ ಮಠದಲ್ಲಿ ಪೂರೈಸಿದರು.  

ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರುದ್ರಸ್ವಾಮಿ ಶಾಲೆಗಳಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸಲು ಇರುವ ಹಲವು ತೊಡಕುಗಳನ್ನು ಮನಗಂಡರು. ಆ ಕುರಿತು ಆಧ್ಯಯನ ಮಾಡಿ , ಶೈಕ್ಷಣಿಕವಾಗಿ ಅಧ್ಯಯನ ನಡೆಸಿ ತಮ್ಮದೇ ಆದ ಹೊಸತೊಂದು ಕ್ರಿಯಾಶೀಲ ಕಲಿಕಾ ವಿಧಾನವೊಂದನ್ನು ರೂಪಿಸಿದರು. ಈ ಕಲಿಕಾ ವಿಧಾನಕ್ಕೆ ಅಗತ್ಯವಾದ ತರಬೇತಿ ಸಲಕರಣೆ ಗಳನ್ನು ತಾವೇ ಸ್ವತ: ಸಿದ್ಧಪಡಿಸಿದರು. ನಂತರ ನಾಡಿನಾದ್ಯಂತ ಗಡಿಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಶಿಶುವಿಹಾರ, ಪ್ರಾಥಮಿಕ,ಮಾಧ್ಯಮಿಕ ,ಪ್ರೌಢಶಾಲೆ , ಡಿ.ಎಡ್, ಬಿ.ಎಡ್, ಎಂ.ಎಡ್ ಕಾಲೇಜುಗಳಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ, ಪ್ರಾಧ್ಯಾಪಕರುಗಳಿಗೆ ಕನ್ನಡ ಕಲಿಕಾ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ ಶಾಲೆ, ಖಾಸಗಿ, ಅನುದಾನಿತ, ಸಂಚಾರಿ ಶಾಲೆ, ಟೆಂಟ್ ಶಾಲೆ, ಬಯಲು ಶಾಲೆ ಹೀಗೆ ಎಲ್ಲಾ ಬಗೆಯ ಶಾಲೆಗಳಲ್ಲಿಯೂ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಹಲವು ಗ್ರಾಮಗಳಲ್ಲಿ ವಯಸ್ಕರ ಶಿಕ್ಷಣ ಶಾಲೆ, ಪಟ್ಟಣ ಗಳಲ್ಲಿ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ಸುಲಭ ಬಗೆಯ ಭೋಧನೆ ನೀಡಿದ್ದಾರೆ. ಚಿತ್ರಕಲೆ, ಸಂಗೀತ, ಆಟ ,ಅಭಿನಯ, ಧಾರ್ಮಿಕತೆ, ನೈತಿಕತೆ, ಓರಿಗಾಮಿ, ಜಾದೂ, ಸಾಂಖ್ಯಿಕತೆ, ಚಮತ್ಕಾರ, ನಾಟಕ, ಕತೆ ಮುಂತಾದ ೧೪ ವಿವಿಧ ರೀತಿಯ ಕಲೆಗಳ ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಸುವ ಪ್ರಾತ್ಯಕ್ಷಿಕೆ ನೀಡುತ್ತಾ ಜನಮೆಚ್ಚುಗೆಗೆ ಪಾತ್ರರಾಗಿದ್ದು 'ನಡೆದಾಡುವ ಶಿಕ್ಷಕ','ಅಕ್ಷರ ಚಕ್ರವರ್ತಿ','ಓಡಾಡುವ ನಾಡೋಜ' ,'ಸಕಲ ಕಲಾ ಶಿಕ್ಷಕ' ಎಂಬಿತ್ಯಾದಿ ಹಲವು ರೀತಿಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜತೆಗೆ ಇವರು ಕಾರ್ಯಕ್ರಮ ನೀಡಿರುವ ಸವಿನೆನಪಿಗಾಗಿ  ಶಿಕ್ಷಕರು, ಮಕ್ಕಳು, ಪೋಷಕರು ಸೇರಿ ರಾಜ್ಯದ 3021 ಶಾಲೆಗಳ ಅಂಗಳದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪರಿಸರದ ಉಳಿವಿಗೆ ಸ್ಪಂದಿಸಿದ್ದಾರೆ. ಶ್ರೀ ರುದ್ರಸ್ವಾಮಿ ಅವರು ಕೇವಲ ಶಾಲಾ ಮಕ್ಕಳಷ್ಟೇ ಅಲ್ಲದೆ ರಾಜ್ಯದ ಇತರ ಸಂಪನ್ಮೂಲ ಶಿಕ್ಷಕರಿಗೂ ಹಲವು ಕಾರ್ಯಾಗಾರಗಳನ್ನು ನಡೆಸಿ ರಾಷ್ಟ್ರಮಟ್ಟದ ಸಂಪನ್ಮೂಲ ಶಿಕ್ಷಕ ಎಂಬ ಗೌರವ ಗಳಿಸಿದ್ದಾರೆ. ನಾಡಿನ ಹಾಗೂ ಹೊರ ರಾಜ್ಯದ ಸುಮಾರು 56 ದೂರದರ್ಶನ ಕೇಂದ್ರಗಳಲ್ಲಿಯೂ ಇವರ ಕನ್ನಡ ಕಲಿಕಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪ್ರಸಾರಗೊಂಡಿದ್ದು ಹಲವು ಕಾರ್ಯಕ್ರಮಗಳು ಹತ್ತಕ್ಕೂ ಹೆಚ್ಚು ಬಾರಿ ಮರುಪ್ರಸಾರಗೊಂಡಿದೆ. ಹಲವು ಅನಿವಾಸಿ ಕನ್ನಡಿಗರು ಇವರ ಕಾರ್ಯಕ್ರಮಗಳನ್ನು ಚಿತ್ರೀಕರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರುದ್ರಸ್ವಾಮಿ ಯವರ ಶೈಕ್ಷಣಿಕ ವಿನೂತನ ಸಂಶೋಧನೆಗಳನ್ನು ಅಳವಡಿಸಿಕೊಂಡು ನಾಡಿನಲ್ಲಿರುವ 162 ಶಿಕ್ಷಕ / ಶಿಕ್ಷಕಿಯರು ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದ ಅತ್ಯುತ್ತಮ ಶಿಕ್ಷಕ ರೆಂಬುದಾಗಿ ಸನ್ಮಾನಿತಗೊಂಡಿರುತ್ತಾರೆ.

ಶ್ರೀ ರುದ್ರಸ್ವಾಮಿ ಯವರು ಶೈಕ್ಷಣಿಕವಾಗಿ ಸಂಶೋಧನೆ ನಡೆಸಿ 'ಅಕ್ಷರ ಚಿತ್ತಾರ ','ಅಕ್ಷರ ಮಂದಾರ','ಅಕ್ಷರ ಲಹರಿ' ಮುಂತಾದ ಶಿಕ್ಷಣ ಕ್ಷೇತ್ರಕ್ಕೆ ಅತ್ಯುಪಯುಕ್ತವಾದ 72 ಕೃತಿಗಳನ್ನು ರಚಿಸಿದ್ದಾರೆ. ಕರುನಾಡಿನ ಕಂದಮ್ಮಳೊಬ್ಬಳು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರಿಗೆ ಪತ್ರ ಬರೆದ ಪರಿಣಾಮ ಶ್ರೀ ಅಬ್ದುಲ್ ಕಲಾಮ್ ರವರು ಶ್ರೀ ರುದ್ರಸ್ವಾಮಿ ಯವರನ್ನು ಆಹ್ವಾನಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ಅವರಿಂದ ಕನ್ನಡದಲ್ಲಿಯೇ ಕಾರ್ಯಕ್ರಮ ಕೇಳಿ ನೋಡಿ ಸಂಭ್ರಮಿಸಿದ್ದಾರೆ. ಶ್ರೀ ರುದ್ರಸ್ವಾಮಿಯವರು ಈ ಮೂಲಕ ಮಾಜಿ ರಾಷ್ಟ್ರಪತಿ ಗಳಿಂದ ಆಹ್ವಾನಿತಗೊಂಡ ಆರು ಕೋಟಿಗೊಬ್ಬ ಶಿಕ್ಷಕ ನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ನಾಡಿನ ಅನೇಕ ಶೈಕ್ಷಣಿಕ ಸಂಘ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು , ಮಠಾಧೀಶರು, ಸಂಸ್ಥೆಗಳು ಇವರ ಕನ್ನಡ ಸೇವೆ ಗುರುತಿಸಿ ಸನ್ಮಾನಿಸಿದ್ದಾರೆ. ಕನ್ನಡ ಭಾಷಾ ಸುಲಭ ಕಲಿಕೆ ಮತ್ತು ವಿನೂತನ ಚಿತ್ರಕಾವ್ಯ ಕಲಾ ಪ್ರದರ್ಶನಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದು ಲಕ್ಷಾಂತರ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರುದ್ರಸ್ವಾಮಿಯವರ ನಾಡಿನ ಮತ್ತು ಸಾಮಾಜಿಕ ಕಾಳಜಿ ಇಷ್ಟಕ್ಕೆ ನಿಲ್ಲುವುದಿಲ್ಲ. ಕಳೆದ ಉತ್ತರ ಕರ್ನಾಟಕ ನೆರೆಯ ಸಂದರ್ಭದಲ್ಲಿ ಬೀದಿಗೆ ಬಿದ್ದಿದ್ದ ಸುಮಾರು 25 ಬುದ್ಧಿಮಾಂದ್ಯ ಮಕ್ಕಳನ್ನು ಕರೆದೊಯ್ದು ಅವರಿಗೆ ದಾವಣಗೆರೆಯಲ್ಲಿ ವಸತಿ ವ್ಯವಸ್ಥೆ ಮಾಡಿ, ಅವರ ಪಾಲನೆ ಪೋಷಣೆ , ಸಂರಕ್ಷಣೆ ಮಾಡುತ್ತಿದ್ದಾರೆ. ಇಂಥಹ ಕ್ರಿಯಾಶೀಲ, ಸಾಮಾಜಿಕ ಕಾಳಜಿಯ ಕನಸುಗಾರನಿಗೆ ಈ ಬಾರಿಯ ಸಮಾಜ  ಸೇವಕರ ಸಮಿತಿಯ ಗೌರವ.
 

No comments:

Post a Comment