Monday 1 August 2011

ಸದ್ದಿಲ್ಲದೇ ಭಾರತ ಕಟ್ಟುತ್ತಿರುವ ಕರ್ನಾಟಕದ ಕನಸುಗಾರ ಡಾ|| ಹರೀಶ್ ಹಂದೆ, ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಗೆ ಮ್ಯಾಗ್ಸೆಸ್ಸೆ ಅವಾರ್ಡ್   

ಡಾ.ಹರೀಶ್ ಹಂದೆ , ನೀಲಿಮಾ ಮಿಶ್ರಾ : ಮೊನ್ನೆ ಮ್ಯಾಗ್ಸೆಸ್ಸೆ ಅವಾರ್ಡ್ ಬರುವವರೆಗೆ ಈ ಹೆಸರುಗಳು  ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಸದ್ದಿಲ್ಲದೆ, ಯಾವ ಸುದ್ದಿಯ ಹಂಗಿಗೂ ಬೀಳದೆ ನಿಶ್ಯಬ್ದವಾಗಿ ’ಭಾರತ’ ಕಟ್ಟುತ್ತಿರುವ ಲಕ್ಷಾಂತರ ಮಹನೀಯರಲ್ಲಿ ಇವರು ಕೂಡಾ ಒಬ್ಬರು.

ತಂತ್ರಜ್ಞಾನದ ಮೂಲಕ ಲಕ್ಷಾಂತರ ದೇಶವಾಸಿಗಳ ಬದುಕಲ್ಲಿ ಬೆಳಕು ತಂದ ಕರ್ನಾಟಕದ ಡಾ|| ಹರೀಶ್ ಹಂದೆ ಹಾಗೂ ಮಹಾರಾಷ್ಟ್ರದ ನೀಲಿಮಾ ಮಿಶ್ರಾ ಈ ಬಾರಿಯ ಪ್ರತಿಷ್ಟಿತ ಮ್ಯಾಗ್ಸೆಸ್ಸೆ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸೌರ ಶಕ್ತಿಯನ್ನು ಉಪಯೋಗಿಸಿ ೨ ಲಕ್ಷಕ್ಕೂ ಅಧಿಕ ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಮನೆಗಳಿಗೆ ಸೌರ ವಿದ್ಯುತ್ ನೀಡಿರುವ ಕರ್ನಾಟಕದ ಸೆಲ್ಕೋ ಇಂಡಿಯಾ ಕಂಪನಿಯ ಸಂಸ್ಥಾಪಕ ಡಾ.ಹರೀಶ್ ಹಂದೆ ಹಾಗೂ ಸಾವಿರಾರು ಗ್ರಾಮೀಣರನ್ನು ಸಂಘಟಿಸಿ ಅವರಲ್ಲಿ ಅರಿವು ಮೂಡಿಸಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಿ, ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣ ವಾಗಿರುವ 'ಭಗಿನಿ ನಿವೇದಿತಾ ಗ್ರಾಮ ವಿಜ್ಞಾನ ನಿಕೇತನ್' ಸಂಸ್ಥೆಯ ಸಂಸ್ಥಾಪಕಿ ನೀಲಿಮಾ ಮಿಶ್ರಾ ರಿಗೆ ಮ್ಯಾಗ್ಸೆಸ್ಸೆ ಅವಾರ್ಡ್ ನೀಡುವ ಮೂಲಕ ಪ್ರಶಸ್ತಿ ತನ್ನ ಮೌಲ್ಯವನ್ನೇ ಹೆಚ್ಚಿಸಿಕೊಂಡಿದೆ ಎನ್ನಬಹುದು.

ಡಾ.ಹರೀಶ್ ಹಂದೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಂದಟ್ಟು ಗ್ರಾಮದಲ್ಲಿ ಜನಿಸಿದ ಹರೀಶ್ ಐ‌ಐಟಿ ಕರಗ್‌ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಅಮೆರಿಕಾದ ಮೆಸಾಚುಸೆಟ್ಸ್ ವಿ.ವಿಯಲ್ಲಿ ಪಿ.ಎಚ್.ಡಿ ಅಧ್ಯಯನ ಆರಂಭಿಸಿದರು. ಈ ನಡುವೆ ಪ್ರವಾಸಕ್ಕೆ ತೆರಳಿದಾಗ ಭಾರತಕ್ಕಿಂತಲೂ ಹೆಚ್ಚು ಬಡಜನರನ್ನು ಹೊಂದಿರುವ ಡೊಮಿನಿಯನ್ ರಿಪಬ್ಲಿಕ್‌ನಲ್ಲಿ ಸೌರಶಕ್ತಿಯ ಬಳಕೆ, ಪ್ರಯೋಜನಗಳನ್ನು ಕಂಡು ಅಚ್ಚರಿಗೊಂಡ ಅವರು ಮುಂದೆ ಸೌರಶಕ್ತಿಯ ಕುರಿತು ವಿಶೇಷ ಅಧ್ಯಯನ ನಡೆಸಿ ಅದೇ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶದಲ್ಲಿ ಡಾಕ್ಟರೇಟ್ ಗಳಿಸಿದರೂ ಬಹುತೇಕರಂತೆ ಅಲ್ಲೇ ಉಳಿದುಹೋಗದೆ ಭಾರತಕ್ಕೆ ಮರಳಿದ ಹಂದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಮತ್ತು ಇತರ ಉಪಯೋಗಗಳ ಕುರಿತು ಸಂಶೋಧನೆ ಆರಂಭಿಸಿದರು. ಅವರ ಹಲವು ವರ್ಷಗಳ ಸಂಶೋಧನೆ, ಕನಸುಗಳ ಪರಿಣಾಮವಾಗಿ ಆರಂಭಗೊಂಡಿದ್ದು ಅವರ ’ಸೆಲ್ಕೊ ಇಂಡಿಯಾ ಕಂಪನಿ’. ದೇಶದ ಬಡಜನರ ಕುರಿತ ಅವರ ಕಾಳಜಿ ವಿಶೇಷವಾದದ್ದು, ಹಾಗಾಗಿಯೇ ಸೆಲ್ಕೊ ಬಡಜನರಿಗಾಗಿಯೇ ಅತ್ಯಂತ ಕಡಿಮೆ ವೆಚ್ಚದ ಸೌರ ವಿದ್ಯುತ್ ಉಪಕರಣಗಳನ್ನು ಉತ್ಪಾದಿಸುತ್ತಿದೆ. ಸೌರಶಕ್ತಿಯ ವಿದ್ಯುತ್ ಅನ್ನು ಬಡವರಿಗೆ ತಲುಪಿಸುವುದು, ಅದಕ್ಕೆ ಹಲವಾರು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವುದು, ಆ ಆರ್ಥಿಕ ಸಹಾಯ ತೀರುವವರೆಗೂ ಅದು ಅವರಿಗೆ ಹೊರೆಯಾಗದಂತೆ ಬೆಂಬಲ ನೀಡುವುದು, ಒಟ್ಟಾರೆಯಾಗಿ ಭಾರತದ ಬಡ ಗ್ರಾಮೀಣ ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರವಿದ್ಯುತ್‌ನ ಪ್ರಯೋಜನಗಳು ತಲುಪುವಂತೆ ಮಾಡುವುದು ಸೆಲ್ಕೊನ ಪ್ರಮುಖ ಉದ್ದೇಶ. 

ಡಾ||ಹರೀಶ್‌ರ ದೂರದೃಷ್ಟಿತ್ವದಿಂದಾಗಿ ಸೆಲ್ಕೊ ಈ ಕಾರ್ಯದಲ್ಲಿ ಅಪರಿಮಿತ ಯಶಸ್ಸು ಗಳಿಸಿದೆ. ಕರ್ನಾಟಕ, ಕೇರಳ, ಗುಜರಾತ್ ರಾಜ್ಯಗಳ ೧,೨೫,೦೦oಕ್ಕೂ ಅಧಿಕ ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ರೈತರು ಸೌರಶಕ್ತಿಯ ವಿದ್ಯುತ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ಹೊಂದಿರುವ ಸೆಲ್ಕೋ ಪ್ರಸ್ತುತ ೨೫ ಶಾಖೆಗಳನ್ನು ಹೊಂದಿದೆ. ೨೦೦೫ ರ ’ಆಶ್‌ಡೆನ್ ಅವಾರ್ಡ್’ ಪ್ರಶಸ್ತಿಗೆ ಭಾಜನರಾಗಿರುವ ಡಾ|| ಹರೀಶ್ ಹಂದೆ ದೇಶದ ೧೦ ಲಕ್ಷಕ್ಕೂ ಅಧಿಕ ಮಂದಿಗೆ ಈ ಪ್ರಯೋಜನಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

"ಕೇವಲ ಸಾಫ್ಟ್ ವೇರ್ ಇಂಜಿನಿಯರ್ ಗಳ ಸಂಖ್ಯೆ ಹೆಚ್ಚಿದರೆ, ಐ.ಟಿ ಕಂಪನಿಗಳು ಹೆಚ್ಚಿದರೆ, ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾದ ಮಾತ್ರಕ್ಕೆ ಕರ್ನಾಟಕ ಅಭಿವೃದ್ಧಿ ಹೊಂದಿದೆ ಎಂದು ಹೇಳಲಾಗದು. ಗ್ರಾಮೀಣ ಪ್ರದೇಶದಲ್ಲಿರುವ ಜನರ ಬದುಕು ಬೆಳಗುವಂತಾಗಬೇಕು. ಹಾಗಾದಲ್ಲಿ ಮಾತ್ರ ಒಂದು ರಾಜ್ಯ ಅಥವಾ ದೇಶ ಅಭಿವೃದ್ಧಿ ಪಥದತ್ತ ನಡೆಯುತ್ತಿದೆ ಎನ್ನಬಹುದು. ಗ್ರಾಮೀಣ ಪ್ರದೇಶದ ಜನರ ಮೂಲಭೂತ ಸೌಕರ್ಯಗಳಿಗಾಗಿ ಶ್ರಮಿಸುವುದೇ ನನ್ನ ಗುರಿ " ಎಂದಿದ್ದಾರೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಹರೀಶ್ . ಸ್ವತಃ ಗ್ರಾಮೀಣ ಬಡ ಕುಟುಂಬದಿಂದ ಬಂದಿರುವ ಡಾ||ಹರೀಶ್ ಹಂದೆ 'ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ. ಬಡವರ ಮನೆ ಬೆಳಗುವುದೇ ನನ್ನ ಗುರಿ. ಆ ಪ್ರಯತ್ನಕ್ಕೆ ಪ್ರೋತ್ಸಾಹ ವೆಂಬಂತೆ ಈ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯನ್ನು ನನ್ನ ಸೆಲ್ಕೋ ಕಂಪನಿಯ ಎಲ್ಲ ಉದ್ಯೋಗಿ ಮಿತ್ರರಿಗೆ ಅರ್ಪಿಸುತ್ತಿದ್ದೇನೆ' ಎಂದಿದ್ದಾರೆ.  'ನಗರದ ಯುವಕರು ಸಾಮಾಜಿಕ ಕಳಕಳಿಯನ್ನು ಮರೆತಿದ್ದಾರೆ. ಎಲ್ಲರಿಗೂ ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್ ಆಗುವುದೇ ದೊಡ್ಡ ಗುರಿ. ಸಾಮಾಜಿಕ ಕಾಳಜಿ ಇರುವವರ ಸಂಖ್ಯೆ ಕಡಿಮೆಯಾಗುತ್ತಿದೆ' ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಹರೀಶ್.

ನಮ್ಮ ಖುಷಿಯೆಂದರೆ ಹರೀಶ್ ನಮ್ಮ ಕನ್ನಡದವರು. ಉಡುಪಿ ಜಿಲ್ಲೆಯ ಕೋಟ ದವರು. ಕಳೆದ ೩ ವರ್ಷಗಳ ಹಿಂದೆಯೇ ನಮ್ಮ ಚೈತ್ರರಶ್ಮಿಯಲ್ಲಿ ಹರೀಶರ ಬಗ್ಗೆ ನಾನು ಬರೆದಿದ್ದೆ.(ಲೇಖನ ಕೆಳಗಿದೆ). 

ನೀಲಿಮಾ ಮಿಶ್ರಾ
ನೀಲಿಮಾ ಮಿಶ್ರಾ ಕೂಡಾ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಮಹಾರಾಷ್ಟ್ರದ ಭಹದರ್ ಪುರ ಗ್ರಾಮದಲ್ಲಿ ಜನಿಸಿದ ನೀಲಿಮಾ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗಳು.  ಪುಣೆ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ನೀಲಿಮಾ ನಂತರ ತಮ್ಮ ಸಂಪೂರ್ಣ ಬದುಕನ್ನು ಸಮಾಜದ ಏಳಿಗೆಗಾಗಿ ಮೀಸಲಿಟ್ಟಿದ್ದಾರೆ. ವೈವಾಹಿಕ ಬಂಧನಕ್ಕೆ ಒಳಗಾಗದೆ ಸಂಪೂರ್ಣ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೀಲಿಮಾ 'ಭಗಿನಿ ನಿವೇದಿತಾ ಗ್ರಾಮೀಣ ವಿಜ್ಞಾನ ನಿಕೇತನ್' ಸಂಸ್ಥೆಯನ್ನು  ಸ್ಥಾಪಿಸಿ ಸಾವಿರಾರು ಗ್ರಾಮೀಣರ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದಾರೆ. ಬ್ಯಾಂಕ್ ಗಳಿಂದ, ಖಾಸಗಿ ಲೇವಾದೇವಿ ಗಾರರಿಂದ ಬಡ್ಡಿಗೆ ಸಾಲ ಪಡೆದು ನಂತರ ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದ ಗ್ರಾಮೀಣ ರೈತರು ಹಾಗೂ ಮಹಿಳೆಯರನ್ನು ಸಂಘಟಿಸಿ ಸ್ವಸಹಾಯ ಗುಂಪುಗಳನ್ನು ರಚಿಸಿ ರೈತರೇ ರೈತರಿಗೆ ನೆರವಾಗುತ್ತ ಆರ್ಥಿಕವಾಗಿ ಸಬಲರಾಗುವಂತೆ , ಸಂಘತಿತರಾಗುವಂತೆ, ಸಶಕ್ತರಾಗುವಂತೆ ಮಾಡಿದ ಸಾಧನೆ ನೀಲಿಮಾರದ್ದು. ಅಷ್ಟೇ ಅಲ್ಲ ರೈತರು ಮತ್ತು ಮಹಿಳೆಯರು ಸ್ವ-ಉದ್ಯೋಗಗಳನ್ನು, ಗೃಹ ಕೈಗಾರಿಕೆಗಳನ್ನು ಆರಂಭಿಸುವಂತೆ ಪ್ರೋತ್ಸಾಹಿಸಿ ಇಂದು ಅದರ ಮೂಲಕ ಸಾವಿರಾರು ಮಂದಿ ಉದ್ಯೋಗ ಪಡೆಯುವಂತೆ ಮಾಡಿ ಒಂದು ಸ್ವಾವಲಂಬಿ ಗ್ರಾಮ ನಿರ್ಮಾಣ ಮಾಡಿದ ಖ್ಯಾತಿ ನೀಲಿಮಾ ಮಿಶ್ರಾ ಅವರದ್ದು. ಭಹದರ್ ಪುರ ಗ್ರಾಮದಲ್ಲಿ ಅವರು ಪ್ರತಿಯೊಬ್ಬರಿಗೂ ದೀದಿ ಎಂದೇ ಪರಿಚಿತರು. ಮಹಾರಾಷ್ಟ್ರದ ಇತೆರೆಡೆಯ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದರೆ ಭಹದರ್ ಪುರ ದ ರೈತರು ಮಾತ್ರ ಬ್ಯಾಂಕ್ ಗಳಿಂದ , ಲೇವಾದೇವಿ ಗಾರರಿಂದ ಸಾಲ ಪಡೆಯುವ ಗೋಜಿಗೆ ಹೋಗದೆ ತಮ್ಮಲ್ಲೇ ತಾವು ನೆರವಾಗುತ್ತ ಸ್ವಾವಲಂಬಿಗಳಾಗಿ ದೇಶದ ಮಾದರಿ ಹೆಮ್ಮೆಯ ಗ್ರಾಮವಾಗಲು ನೀಲಿಮಾ ರ ಪ್ರಯತ್ನ ಅಸಾಧಾರಣವಾದುದು. ಹಾಗಾಗಿಯೇ ಮ್ಯಾಗ್ಸೆಸ್ಸೆ ಅವಾರ್ಡ್ ಅವರನ್ನು ಹುಡುಕಿ ಬಂದಿದೆ. 

ಸದ್ದಿಲ್ಲದೆ, ಸುದ್ದಿಯ ಹಂಗಿಗೆ ಬೀಳದೆ ’ಭಾರತ’ ಕಟ್ಟುತ್ತಿರುವ ಇಂತಹ ಲಕ್ಷಾಂತರ ಮಹನೀಯರಿಗೆ ನಮ್ಮ ನಮನ. ಇಂತವರ ಸಂಖ್ಯೆ ಸಾವಿರವಾಗಲಿ ಎಂದು ಆಶಿಸೋಣ.


ಹರೀಶ್, ನೀಲಿಮಾ : ಹಳ್ಳಿಜನರ ಹಾಗೂ ಬಡವರ ಬಗೆಗಿನ ನಿಮ್ಮ ಕಾಳಜಿಗೆ ಹ್ಯಾಟ್ಸ್ ಆಫ್. ನಿಮ್ಮ ಸಾಧನೆಗೆ ಅಭಿನಂದನೆಗಳು. 


ಎರಡು ವರ್ಷಗಳ ಹಿಂದೆ ಚೈತ್ರರಶ್ಮಿಯಲ್ಲಿ ಹರೀಶ್ ಹಂದೆ ಬಗ್ಗೆ ನಾನು ಬರೆದ ಲೇಖನ


ಕನ್ನಡಪ್ರಭದಲ್ಲಿ ಹರೀಶ್ ಸಂದರ್ಶನ 


No comments:

Post a Comment