Monday 1 August 2011

ಹೀಗೊಂದು ಆತ್ಮವಿಶ್ವಾಸದ ಸ್ವಗತವು......

ಹೌದು, ಕಳೆದ ಕಷ್ಟದ ದಿನಗಳು ಬದುಕಿನ ಅತ್ಯುನ್ನತ ಪಾಠ ಕಲಿಸಿದೆ. ಬದುಕೀಗ ಮತ್ತೆ 'ಜೀವನ್ಮುಖಿ'. ಕಳೆದ ಸಂಕಟಗಳು ಬದುಕಿನ 'ಅಂಟಿಕೊಳ್ಳದ ಚಿತ್ರಗಳು' ಅಷ್ಟೇ. 'ಕನ್ನಡಿ ಬಿಂಬದ ನೆರಳಿನಲ್ಲೀಗ' ಉತ್ಸಾಹದ ಪ್ರತಿಫಲನ. ಬಂದದ್ದೆಲ್ಲವನ್ನೂ ಖುಷಿಯಿಂದ ಸ್ವೀಕರಿಸಿದ್ದೇನೆ. 'ಉಳಿಸಿಲ್ಲ ನಾನೇನನ್ನೂ ಕಲ್ಲಿನ ಹೃದಯದಂತೆ''ಕತ್ತಲ ಗರ್ಭದ ಮಿಂಚು' ಸುಳಿದು ಹೋದ ಮೇಲೆ ಸಂಕಟ, ಸಂಭ್ರಮ ಬದುಕಿಗೀಗ ಎಲ್ಲವೂ 'ಸ್ಪ್ರುಶ್ಯ' ವೇ. ಜೀವನಯಾನದ 'ತೆರೆಬಾರದ ತೀರದಲ್ಲಿ ಮೂಡಿದ ಹೆಜ್ಜೆಗುರುತು'ಗಳನ್ನು ನಾನೆಂದಿಗೂ ಮರೆಯಲಾರೆ. ಕಾಲವೆಂಬೋ ನದಿಯ ಸೆಳವಿನಲ್ಲಿ ಬದುಕಿನ ಸಂಕಟಗಳ ಸಾವಿರ ಕಲ್ಮಶಗಳು ತೊಳೆದುಹೋಗಿ ಅಲ್ಲೀಗ 'ಒಲವಿನ ಚಿಟ್ಟೆಯ ಕಂಬಳಿ ಹುಳು' ಮೆಲ್ಲನೆ ಮಿಸುಕಾಡುತ್ತಿದೆ. ಅದೀಗ ನನ್ನಕ್ಕರೆಯ ಬಳಗದ ಗೆಳೆಯರ ಮುಖದ ಮೇಲೆ ಮಂದಹಾಸದ ಚಿಟ್ಟೆಯಾಗಿ ಹಾರುತ್ತಾ ನನ್ನೊಳಗೊಂದು ಉತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತಿದೆ. ನನ್ನೊಲವಿನ ಬಳಗದ ಗೆಳೆಯರ ಸಾಧನೆಯ ಸಂತಸದಲ್ಲಿ ನಾನೂ ನನ್ನ ಕನಸೂ ಸಂಭ್ರಮಿಸುತ್ತಿದ್ದೇವೆ. ಮತ್ತೀಗ ಅದು ನನ್ನೊಳಗೆ 'ನಾನು ಸೋಲುವುದಿಲ್ಲ, ಸೋತರದು ನಾನಲ್ಲ' ಎಂಬ ಆತ್ಮವಿಶ್ವಾಸದ ಉಜ್ವಲ ಭಾವವೊಂದನ್ನು ಸೃಷ್ಟಿಸುತ್ತಿದೆ. ಹೌದು, ನಾವು ಸೋಲುವುದಿಲ್ಲ, ಯಾರೂ ಸೋಲುವುದು ಬೇಡ. ಭಾವಯಾನ ನಮ್ಮೆಲ್ಲರನು ಗೆಲ್ಲಿಸಲಿ, ಜೀವನಕ್ಕೊಂದು ಸಮೃದ್ಧಿ ತರಲಿ.

No comments:

Post a Comment